ಟ್ಯಾಕ್ಸಿಗಳಲ್ಲಿ ಚೈಲ್ಡ್ ಸೇಪ್ಟಿ ಲಾಕ್ ಅಳವಡಿಸದಂತೆ ನಿರ್ದೇಶಿಸಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜು.18: ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಟ್ಯಾಕ್ಸಿಗಳಲ್ಲಿ ಚೈಲ್ಡ್ ಸೇಪ್ಟಿ ಲಾಕ್‌ಗಳನ್ನು ಅಳವಡಿಸದಂತೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ವಿವರಣೆ ಕೇಳಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಸಂತನಗರದ ಬೆಂಗಳೂರು ಪ್ರಸೂತಿ ವಿಜ್ಞಾನ ಹಾಗು ಸ್ತ್ರೀರೋಗಶಾಸ್ತ್ರ ಸಮಾಜ ದಾಖಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾ. ಆರ್ ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿ ಲಕ್ಷ್ಮಿ ಅಯ್ಯಂಗಾರ್, ಟ್ಯಾಕ್ಸಿಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಚೈಲ್ಡ್ ಸೇಫ್ಟಿ ಲಾಕ್ ಹೊಂದಿರುವ ಟ್ಯಾಕ್ಸಿಗಳಲ್ಲಿ ಹಿಂಬದಿಯ ಡೋರ್‌ಗಳು ಸಂಪೂರ್ಣ ಚಾಲಕನ ನಿಯಂತ್ರಿಣದಲ್ಲಿರುತ್ತವೆ. ಇಂತಹ ಲಾಕ್ ವ್ಯವಸ್ಥೆಯನ್ನು ದುಷ್ಟ ಚಾಲಕರು ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರನ್ನು ಕಾರಿನೊಳಗೇ ಕೂಡಿ ಹಾಕಿಕೊಂಡು ಕಿರುಕುಳ ನೀಡಿದ ಪ್ರಕರಣಗಳಿವೆ.
ಜು.1ರಂದು ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮುಂಬೈ ಮೂಲದ ಮಹಿಳಾ ಆರ್ಕಿಟೆಕ್ಟ್ ಕರೆದೊಯ್ಯುವ ವೇಳೆ ಚೈಲ್ಡ್ ಸೇಫ್ಟಿ ಲಾಕ್ ನಿಂದ ಟ್ಯಾಕ್ಸಿಯೊಳಗೆ ಯುವತಿಯನ್ನು ಕೂಡಿಹಾಕಿಕೊಂಡ ಚಾಲಕ ಕಾರನ್ನು ಹೈದರಾಬಾದ್ ರಸ್ತೆಯ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದ. ನಂತರ ಯುವತಿಯ ಬಟ್ಟೆ ಬಿಚ್ಚಿ, ಫೋಟೋ ತೆಗೆದು ಲೈಂಗಿಕ ಕಿರುಕುಳ ನೀಡಿದ್ದ. ಮಹಿಳೆ ಮುಂಬೈಗೆ ವಾಪಸ್ಸಾದ ನಂತರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಆರೋಪಿಯನ್ನು ಬಂಧಿಸಲಾಗಿತ್ತು.
ಹೊಸದಿಲ್ಲಿ ಹೈಕೋರ್ಟ್ ಈಗಾಗಲೇ ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ಬಳಸದಂತೆ ನಿರ್ದೇಶಿಸಿದೆ. ನಿಯಮ ಉಲ್ಲಂಘಿಸಿದವರ ಲೈಸನ್ಸ್ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಪ್ರಯಣಿಕರ ಸುರಕ್ಷತೆಗಾಗಿ ರಾಜ್ಯದಲ್ಲಿಯೂ ಇಂತಹುದೇ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ ಇದೊಂದು ಗಂಭೀರ ವಿಷಯವಾಗಿದ್ದು, ಈ ಸಂಬಂಧ ಕರ್ನಾಟಕ ಮೋಟಾರು ವಾಹನ ಕಾಯಿದೆ ಅಥವಾ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ನಿಯಮಗಳ ಪ್ರಕಾರ ಸರಕಾರ ಕೈಗೊಳ್ಳಲು ಇರುವ ಸಾಧ್ಯತೆಗಳ ಕುರಿತು ವಿವರಣೆ ನೀಡುವಂತೆ ಸರಕಾರ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಆ.8ಕ್ಕೆ ಮುಂದೂಡಿತು.







