ಅಂತಾರಾಷ್ಟ್ರೀಯ ವಿಮಾನ ಯಾನದ ಟಿಕೆಟ್ ಮೇಲೆ ಜಿಎಸ್‌ಟಿ ಹೇರಿಕೆ ತಪ್ಪು
ಅಂತಾರಾಷ್ಟ್ರೀಯ ವೈಮಾನಿಕ ಸಾಗಾಟ ಅಸೋಶಿಯೇಶನ್

ಹೊಸದಿಲ್ಲಿ, ಜು. 18: ಅಂತಾರಾಷ್ಟ್ರೀಯ ವಿಮಾನ ಯಾನ ಟಿಕೆಟ್ ಮೇಲೆ ಜಿಎಸ್‌ಟಿ ಹೇರುವುದನ್ನು ತೀವ್ರವಾಗಿ ವಿರೋಧಿಸಿರುವ ಜಾಗತಿಕ ವಿಮಾನ ಯಾನ ಸಂಸ್ಥೆ ಐಎಟಿಎ, ಇದರಿಂದ ಭಾರತ ಜಾಗತಿಕವಾಗಿ ಮಾಡಿಕೊಂಡ ಹಲವು ಒಪ್ಪಂದಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದುದರಿಂದ ಇದು ತಪ್ಪು ತೆರಿಗೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ವೈಮಾನಿಕ ಸಾಗಾಟ ಅಸೋಶಿಯೇಶನ್ (ಐಎಟಿಎ) ಜಗತ್ತಿನ ವಿವಿಧ ಭಾಗಗಳಲ್ಲಿರುವ 280ಕ್ಕೂ ಅಧಿಕ ವಿಮಾನ ಯಾನ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದೆ. ಏರ್ ಇಂಡಿಯಾ, ಜೆಟ್ ಏರ್‌ವೇಸ್ ಹಾಗೂ ವಿಸ್ತಾರ ಕೂಡ ಇದರ ಸದಸ್ಯ.
ಅಂತಾರಾಷ್ಟ್ರೀಯ ವಿಮಾನ ಯಾನ ಟಿಕೆಟ್ ಮೇಲೆ ಜಿಎಸ್‌ಟಿ ಅನ್ವಯಿಸುವುದು ತಪ್ಪು. ಭಾರತ ಮಾಡಿಕೊಂಡ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಇದು ಉಲ್ಲಂಘಿಸಿದಂತಾಗುತ್ತದೆ ಎಂದು ಐಎಟಿಎ ಪ್ರಧಾನ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಲೆಕ್ಸಾಂಡರ್ ಡೆ ಜುನೈಕ್ ತಿಳಿಸಿದ್ದಾರೆ.
ಭಾರತದಲ್ಲಿ ಜಿಎಸ್‌ಟಿ ಜಾರಿಗೊಳಿಸಿರುವುದರ ಬಗ್ಗೆ ಅಭಿಪ್ರಾಯ ಕೇಳಿದಾಗ ಅವರು, ಅದಕ್ಕಾಗಿ ನಾವು ಶೂನ್ಯ ಶುಲ್ಕದ ಅಂತಾರಾಷ್ಟ್ರೀಯ ಟಿಕೆಟ್‌ಗಳಿಗೆ ಸರಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು.
ಜಿಎಸ್‌ಟಿ ಅನ್ವಯದಿಂದ ವಿಮಾನ ಯಾನದ ಇಕಾನಮಿ ಹಾಗೂ ಬ್ಯುಸಿನಸ್ ಕ್ಲಾಸ್‌ನ ಟಿಕೆಟ್ ದರದಲ್ಲಿ ಅನುಕ್ರಮವಾಗಿ ಶೇ. 5 ಹಾಗೂ ಶೇ. 12 ಏರಿಕೆಯಾಗಿದೆ ಎಂದು ಅವರು ಹೇಳಿದರು.







