ಮಂಡ್ಯ: ನಾಲೆಗೆ ಬಿದ್ದು ಬೈಕ್ ಸವಾರ ಮೃತ್ಯು

ಮಂಡ್ಯ, ಜು.18: ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿ ಬೈಕ್ ಸವಾರ ಆಯತಪ್ಪಿ ಬೈಕಿನ ಸಮೇತ ಹೇಮಾವತಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಬೀರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಪುರ ಗ್ರಾಮದ ನಿವಾಸಿ ನಂಜುಂಡೇಗೌಡ ಅವರ ಪುತ್ರ ತರಕಾರಿ ವ್ಯಾಪಾರಿ ಶಾಂತರಾಜು(65) ಮೃತ ವ್ಯಕ್ತಿಯಾಗಿದ್ದಾರೆ.
ಶಾಂತರಾಜು ಪಟ್ಟಣಕ್ಕೆ ನಿಂಬೆ ಹಣ್ಣು ವ್ಯಾಪಾರಕ್ಕೆ ಬರುತ್ತಿದ್ದಾಗ ನಿಂಬೆಹಣ್ಣು ತುಂಬಿದ ಚೀಲದಿಂದಾಗಿ ಬೈಕ್‍ನ ಹ್ಯಾಂಡಲ್ ತಿರುಗಿಸಲು ಉಂಟಾದ ತೊಂದರೆಯಿಂದಾಗಿ ಕಾಲುವೆಗೆ ಉರುಳಿದೆ. ತಕ್ಷಣ ಸಾರ್ವಜನಿಕರು ರಕ್ಷಿಸಲು ಪ್ರಯತ್ನಿಸದರಾದರೂ, ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಶಾಂತರಾಜು ಮೃತಪಟ್ಟಿದ್ದರೆಂದು ಹೇಳಲಾಗಿದೆ.
ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮೃತ ಶಾಂತರಾಜು ಅವರ ಪುತ್ರ ಮಹೇಶ್ ಹಾಗೂ ಅವರ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿತ್ತು.
Next Story





