ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ವನಮಹೋತ್ಸವ

ಬಂಟ್ವಾಳ, ಜು. 18: ರಾಜ್ಯದಲ್ಲಿ ಸಮರ್ಪಕವಾದ ಶಿಕ್ಷಣ ನೀತಿ ಇಲ್ಲದಿರುವುದರಿಂದ ಶಿಕ್ಷಣ ವ್ಯವಸ್ಥೆ ಗೊಂದಲದ ಗೂಡಾಗಿದೆ. 2016ರಲ್ಲಿ ರಾಜ್ಯ ಶಿಕ್ಷಣ ನೀತಿಯ ಕುರಿತು ಕಸ್ತೂರಿ ರಂಗನ್ ಕರುಡ ವರದಿ ತಯಾರಿಸಲಾಗಿತ್ತು, ಎರಡೂ ವರ್ಷ ಕಳೆದರೂ ಸರಕಾರ ಆ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಇದರಿಂದಾಗಿ ರಾಜ್ಯದಲ್ಲಿರುವ ಸರಕಾರಿ ಶಾಲೆಯ 50 ಲಕ್ಷ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಿಕ್ಷಣ ಪ್ರೇಮಿ ಬೆಂಗಳೂರಿನ ಅನಿಲ್ ಶೆಟ್ಟಿ ಹೇಳಿದ್ದಾರೆ.
ವಲಯ ಅರಣ್ಯ ಇಲಾಖೆ, ದಡ್ಡಲಕಾಡು ಶಾಲಾಭಿವೃದ್ಧಿ ಸಮಿತಿ ಹಾಗೂ ದತ್ತು ಯೋಜನೆ ಸಂಘಟನೆಯಾದ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಗೊಂದಲದ ನೀತಿಯಿಂದಾಗಿ ಪ್ರತಿಬಾರಿಯೂ ಶೋಷಣೆಗೊಳಗಾಗುವುದು ವಿದ್ಯಾರ್ಥಿಗಳು ಮತ್ತವರ ಪೋಷಕರು. ಸರಿಯಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸರಕಾರಿ ಶಾಲೆ ಉಳಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಲಯ ಅರಣ್ಯಧಿಕಾರಿ ಬಿ. ಸುರೇಶ್ ಮಾತನಾಡಿ, ಪ್ರತಿಯೊಬ್ಬರು ನಮಗೆ ಸಮಾಜದಿಂದ ಏನು ಸಿಗುತ್ತದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡಿರುತ್ತೇವೆಯೇ ವಿನಃ ನಾವೇನು ಸಮಾಜಕ್ಕೆ ಕೊಟ್ಟಿದ್ದೇವೆ ಎಂದು ಯೋಚಿಸುವುದಿಲ್ಲ. ಆದರೆ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್ ಶಾಲೆ ನಿರ್ಮಿಸುವ ಮೂಲಕ ನಾವೇನು ಸಮಾಜಕ್ಕೆ ಕೊಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಕಾರ್ಯ ಅನುಕರಣೀಯ ಎಂದರು.
ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮಕ್ಕೂ ಅವಕಾಶ ಮಾಡಿಕೊಟ್ಟ ಕಾರಣ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ಸರಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇದೇ ಮಾದರಿಯನ್ನು ಅನುಸರಿಸಲು ದಿಟ್ಟ ಹೆಜ್ಜೆ ಇಡಲು ಸರಕಾರ ಮುಂದಾದಾಗ ಕೆಲವೊಬ್ಬರು ಸರಕಾರದ ನಡೆಯನ್ನು ಟೀಕಿಸಿರುವುದು ವಿಷಾದನೀಯ ಎಂದರು.
ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಇದರ ವಿಜ್ಞಾಪನಾ ಪತ್ರವನ್ನು ಸಂದರ್ಭ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಯೋಗೀಶ್, ಸದಸ್ಯ ಪೂವಪ್ಪ ಮೆಂಡನ್, ಅರಣ್ಯಾ ಇಲಖಾ ಸಿಬ್ಬಂದಿ ಸ್ಮಿತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪ್ರಗತಿಪರ ಕೃಷಿಕ ವಸಂತಗೌಡ ಹಳೇಗೇಟು, ಬೆಂಗಳೂರಿನ ಜಯಕರ್ನಾಟಕ ಸಂಘಟನೆಯ ರಾಕೇಶ್‌ಗೌಡ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಸ್ವಾಗತಿಸಿದರು, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಪ್ರಸ್ತಾವಿಸಿದರು. ಶಿಕ್ಷಕಿ ಜಯಾ ಕೆ ವಂದಿಸಿದರು. ಭಾಗ್ಯಲಕ್ಷ್ಮೀ ಹಾಗೂ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಆವರಣದಲ್ಲಿ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಬಳಿಕ ವಿದ್ಯಾರ್ಥಿಗಳ ಪೋಷಕರಿಗೆ ಸಸಿಗಳನ್ನು ವಿತರಿಸಲಾಯಿತು. ಶಾಲಾ ತರಕಾರಿ ಕೈ ತೋಟದಲ್ಲಿ ತರಕಾರಿ ಬೀಜಗಳ ಬಿತ್ತನೆ ಮಾಡಲಾಯಿತು.
ಸರಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಚಾಲನೆ
ರಾಜ್ಯ ಶಿಕ್ಷಣ ನೀತಿ ರೂಪಿಸುವಂತೆ ಆಗ್ರಹಿಸಿ ಸೆ. 8ರಂದು ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥ ನಡೆಯಲಿದೆ. ರಾಜ್ಯದ ಸರಕಾರಿ ಶಾಲೆಯ ಮಕ್ಕಳ ಭವಿಷ್ಯ ಹಿತದೃಷ್ಟಿಯಿಂದ ಈ ಆಂದೋಲನದಲ್ಲಿ ಭಾಗವಹಿಸಲು 7676444225 ಮಿಸ್ಡ್‌ಕಾಲ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಆಂದೋಲನಕ್ಕೂ ದಡ್ಡಲಕಾಡು ಶಾಲೆಯಿಂದ ಚಾಲನೆ ನೀಡಲಾಯಿತು.







