"ಪ್ರಧಾನಿ ಬಂದರು, ಫೋಟೊ ತೆಗೆದರು, ಹೊರಟು ಹೋದರು"
ಮೋದಿ ಸಮಾವೇಶದ ಪೆಂಡಾಲ್ ಕುಸಿತದ ಗಾಯಾಳುಗಳು ಹೇಳಿದ್ದೇನು?

ಪಶ್ಚಿಮ ಬಂಗಾಳ, ಜು.18: ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಧಾನಿ ಮೋದಿಯವರ ಸಮಾವೇಶದಲ್ಲಿ ಪೆಂಡಾಲೊಂದು ಕುಸಿದು ಹಲವರು ಗಾಯಗೊಂಡಿದ್ದರು. ಪ್ರಧಾನಿ ಮೋದಿಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳೊಂದಿಗೆ ಮಾತನಾಡಿದರು. ನಂತರ ಆಟೋಗ್ರಾಫ್ ಕೂಡ ನೀಡಿದರು.
ಆದರೆ ಇದರ ಹೊರತಾಗಿ ಪ್ರಧಾನಿ ಮೋದಿ ಮತ್ತೇನೂ ಮಾಡಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಎಂದು newscentral24x7.com ವರದಿ ಮಾಡಿದೆ.
"ಮೋದಿ ಆಟೋಗ್ರಾಫ್ ನೀಡಿದರು, ಫೋಟೊ ತೆಗೆದರು ನಂತರ ಹೊರಟರು. ನಮ್ಮ ಬಗ್ಗೆ ಅವರಿಗೆ ಕಾಳಜಿ ಇದೆ ಎಂದು ನಾನು ಭಾವಿಸಿದ್ದೆ" ಎಂದು ಗಾಯಾಳುವೊಬ್ಬರು ತಿಳಿಸಿದ್ದಾಗಿ newscentral24x7.com ವರದಿ ಮಾಡಿದೆ.
ಎಕ್ಸ್ ರೇ ವಿಭಾಗದ ಮುಂಭಾಗ ಸ್ಟ್ರೆಚರ್ ಗಳಲ್ಲಿ ಹಾಗು ನೆಲದಲ್ಲಿ 25 ಮಂದಿ ಗಾಯಾಳುಗಳಿದ್ದಾರೆ. ಬಸ್ ಹಾಗು ಟ್ರಕ್ ಗಳಲ್ಲಿ ಅವರನ್ನು ಇಲ್ಲಿಗೆ ಕರೆತರಲಾಗಿತ್ತು. ಇದೀಗ ಅವರು ಮನೆಗೆ ಹೋಗಲು ಬಯಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿದ್ದ ಹೆಸರು ಹೇಳಲಿಚ್ಛಿಸದ ನರ್ಸ್ ಒಬ್ಬರು ತಿಳಿಸಿದ್ದಾರೆ. ಮನೆಗೆ ತೆರಳಲು ಕೂಡ ಗಾಯಾಳುಗಳ ಬಳಿ ಹಣವಿಲ್ಲ ಎಂದವರು ಹೇಳಿದ್ದಾರೆ ಎನ್ನಲಾಗಿದೆ.
ಈ ಘಟನೆಯ ನಂತರ ಹಲವು ಬಿಜೆಪಿ ನಾಯಕರು ಇತ್ತ ತಲೆಹಾಕಿಯೂ ಇಲ್ಲ ಎಂದು ಆರೋಪಿಸಲಾಗಿದೆ.







