ವೆನ್ಲಾಕ್: ರೋಗಿಗಳೊಂದಿಗೆ ಸದ್ವರ್ತನೆಗೆ ಕೆಡಿಪಿ ಸೂಚನೆ

ಮಂಗಳೂರು, ಜು. 18: ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿರುವ ರೋಗಿಗಳೊಂದಿಗೆ ಮತ್ತು ಅವರ ಪರಿಚಾರಕರೊಂದಿಗೆ ವೆನ್ಲಾಕ್ ಸಿಬ್ಬಂದಿ ಗೌರವಯುತ ರೀತಿಯಲ್ಲಿ ವರ್ತಿಸಲು ಕೂಡಲೇ ಕ್ರಮವಹಿಸಲು ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಸೂಚನೆ ನೀಡಲಾಯಿತು. ಜಿ.ಪಂ. ಅಧ್ಯಕ್ಷರು ಮಾತನಾಡಿ, ವೆನ್ಲಾಕ್ನಲ್ಲಿ ಐಸಿಯು ಹಾಸಿಗೆ ಕೊರತೆ ಇರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಇದಲ್ಲದೇ, ಸರಿಯಾದ ರೀತಿಯಲ್ಲಿ ವೈದ್ಯರು ಸ್ಪಂದಿಸದಿರುವ ಬಗ್ಗೆಯೂ ಅಹವಾಲುಗಳು ಬರುತ್ತಿವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ವೆನ್ಲಾಕ್ನಲ್ಲಿನ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಸಂತೋಷ ಕಂಡುಬರುತಿಲ್ಲ. ಚಿಕಿತ್ಸೆ ದೊರಕಿದರೂ, ಅಲ್ಲಿನ ಸಿಬ್ಬಂದಿ ವರ್ತನೆಯ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜನಪ್ರತಿನಿಧಿಗಳು ರೋಗಿಯ ಚಿಕಿತ್ಸೆ ಬಗ್ಗೆ ಯಾವ ವೈದ್ಯರೊಂದಿಗೆ ಮಾತನಾಡಬೇಕು ಎಂಬುದೂ ತಿಳಿಯುತ್ತಿಲ್ಲ ಎಂದು ಹೇಳಿದರು.
ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿದೇವಿ ಮಾತನಾಡಿ, ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಒಟ್ಟು 57 ಐಸಿಯು ಹಾಸಿಗೆಗಳಿವೆ. ಆಸ್ಪತ್ರೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ, ಕೆಎಂಸಿ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೆಎಂಸಿಯ ವಿವಿಧ ಘಟಕಗಳ ಮುಖ್ಯಸ್ಥರು ವೆನ್ಲಾಕ್ನಲ್ಲಿ ರೋಗಿಗಳ ಚಿಕಿತ್ಸೆಯ ಹೊಣೆಗಾರಿಕೆ ಹೊಂದಿದ್ದಾರೆ. ವೆನ್ಲಾಕ್ನಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ 3 ಮಹಡಿಯವರೆಗೆ ಪೂರ್ಣಗೊಂಡಿದ್ದು, 2019ರಲ್ಲಿ ಕಾಮಗಾರಿ ಮುಕ್ತಯವಾಗಲಿದೆ. 17 ನರ್ಸಿಂಗ್ ಕಾಲೇಜುಗಳು ವೆನ್ಲಾಕ್ ಸೇವೆ ಪಡೆಯುತ್ತಿದ್ದು, ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ. ಆರ್. ರವಿ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ 24 ಗಂಟೆಯೂ ರೋಗಿಗಳ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಆಲಿಸಲು ಪೂರ್ಣಪ್ರಮಾಣದ ಅಧಿಕಾರಿ ನೇಮಿಸಿ, ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಲು ಸೂಚಿಸಿದರು.
ಜಿಲ್ಲೆಯ ವಿವಿಧ ಹಾಸ್ಟೆಲ್‍ಗಳಲ್ಲಿ ನೀರು ಸರಬರಾಜು ಸೇರಿದಂತೆ ಮೂಲಸೌಕರ್ಯ ಉತ್ತಮಗೊಳಿಸಲು ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ, ಸಕಾಲದಲ್ಲಿ ಅದನ್ನು ಬಳಕೆ ಮಾಡದಿರುವ ಬಗ್ಗೆ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಒಂದು ವಾರದೊಳಗೆ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವರು ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಆಟದ ಮೈದಾನ ಅಭಿವೃದ್ಧಿಗೊಳಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಹೆಚ್ಚಿನ ಶಾಲಾ ಆಟದ ಮೈದಾನಗಳನ್ನು ಯೋಜನೆಯಡಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಿರುವ ಕಾಂಪೋಸ್ಟ್ ಗೊಬ್ಬರ ಕಳಪೆ ಗುಣಮಟ್ಟದಲ್ಲಿರುವುದು ಕಂಡುಬಂದಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ 1ನೇ ತರಗತಿಗೆ ಕಳೆದ ವರ್ಷಕ್ಕಿಂತ 2140 ಮಕ್ಕಳು ಅಧಿಕ ಸೇರ್ಪಡೆಯಾಗಿದ್ದಾರೆ ಎಂದು ಡಿಡಿಪಿಐ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿರುವ ಆಶ್ರಮ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ಶಾಲೆಗಳ ಶೈಕ್ಷಣಿಕ ನಿರ್ವಹಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಹಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಯು.ಪಿ. ಇಬ್ರಾಹಿಂ, ಅನಿತಾ ಹೇಮನಾಥ ಶೆಟ್ಟಿ, ಜನಾರ್ಧನ ಗೌಡ ಮತ್ತಿತರರು ಇದ್ದರು.







