ಶಿರೂರು ಸ್ವಾಮೀಜಿಯದ್ದು ಕೊಲೆಯಲ್ಲ, ಸಹಜ ಸಾವು: ಪೇಜಾವರ ಶ್ರೀ

ಹುಬ್ಬಳ್ಳಿ, ಜು.19: ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದ್ದು, ವಿಷ ಪ್ರಾಶನದ ಬಗ್ಗೆ ಮಾಹಿತಿಯಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಪೇಜಾವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರೂರು ಸ್ವಾಮೀಜಿ ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೋ ಗೊತ್ತಿಲ್ಲ. ಲಿವರ್, ಕಿಡ್ನಿ ವೈಫಲ್ಯವಾಗಿತ್ತು ಎಂದು ಮಾಹಿತಿ ಬಂದಿದೆ. ಅವರಿಗೆ ವಿಷಪ್ರಾಶನ ಮಾಡುವವರು ಯಾರು?, ಶಿರೂರು ಸ್ವಾಮೀಜಿಗಳಿಗೆ ಯಾರೂ ವಿಷ ನೀಡುವ ಪ್ರಮೇಯವೇ ಇಲ್ಲ. ಸ್ವಾಮಿಗಳು ಯಾರು ಕೊಲೆ ಮಾಡುವುದಿಲ್ಲ ಎಂದರು.
ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೆ ಯಾರ ಮೇಲೂ ಆರೋಪ ಮಾಡಬಾರದು. ಅವರದು ಕೊಲೆ ಎಂಬುದು ಶುದ್ಧ ಸುಳ್ಳು. ಸ್ವಾಮೀಜಿಯದ್ದು ಸಹಜ ಸಾವು. ಅವರ ಸಾವಿನ ಬಗ್ಗೆ ಸಂಶಯಿಸುವುದು ಸರಿಯಲ್ಲ. ಅವರು ಕಳೆದ ಒಂದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ಪೇಜಾವರ ಶ್ರೀ ಹೇಳಿದರು.
ಇಂದು ರಾತ್ರಿ ಉಡುಪಿಗೆ ಹೋಗುತ್ತೇನೆ, ಅಲ್ಲೇ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಕುರಿತು ತೀರ್ಮಾನಿಸುತ್ತೇನೆ. ಶಿರೂರು ಮಠದ ಭಕ್ತರಿಂದ ನನಗೆ ಯಾವುದೇ ಫೋನ್ ಕರೆ ಬಂದಿಲ್ಲ. ಸೋದಿ ಮಠದವರು ಉತ್ತರಾಧಿಕಾರಿ ನೇಮಕ ಮಾಡುತ್ತಾರೆ. ಸಲಹೆ ಕೇಳಿದರೆ ಹೇಳುತ್ತೇನೆ. ಫುಡ್ ಪಾಯ್ಸನ್ ಆಗಿದೆ ಎಂದು ಅವರ ಅಣ್ಣ ನನಗೆ ಫೋನ್ ಮಾಡಿ ಹೇಳಿದ್ದರು. ಪಟ್ಟದೇವರ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ. ನಮಗೂ ಶಿರೂರು ಶ್ರೀಗಳ ಜೊತೆಗೂ ಸಂಪರ್ಕ ಇರಲಿಲ್ಲ. ಅವರ ಕೆಲವು ಹೇಳಿಕೆಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿತ್ತು. ವೈಯಕ್ತಿಕವಾಗಿ ನನಗೆ ಪ್ರೀತಿ ವಿಶ್ವಾಸವಿತ್ತು ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ತನಿಖೆಗೂ ಸಿದ್ಧ
ಉಡುಪಿಯ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ವಿಷ ಪ್ರಾಸನ ಆಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಗತ್ಯ ಬಿದ್ದರೆ ಖಂಡಿತ ತನಿಖೆ ಮಾಡಿಸಲಾಗುವುದು.







