ಈ ಬಾರಿ 3.50 ಲಕ್ಷ 'ಮಣಿಪಾಲ ಆರೋಗ್ಯ ಕಾರ್ಡ್' ವಿತರಿಸುವ ಗುರಿ: ಡಿ.ಬಿ.ಮನಮೋಹನ್

ಮಡಿಕೇರಿ, ಜು.19: ಜನಸಾಮಾನ್ಯರಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸಾ ಸೌಲಭ್ಯ ದೊರಕಬೇಕೆನ್ನುವ ಉದ್ದೇಶದಿಂದ ಕಳೆದ 18 ವರ್ಷಗಳಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಸಂಸ್ಥೆ ತನ್ನ ಸಾಮಾಜಿಕ ಕಳಕಳಿಯ ಅಂಗವಾಗಿ ‘ಮಣಿಪಾಲ ಆರೋಗ್ಯ ಕಾರ್ಡ್’ ಯೋಜನೆಯ ಮೂಲಕ ಕಾರ್ಡ್‍ನ್ನು ವಿತರಿಸುತ್ತಿದೆ. ಈ ಬಾರಿ 3.50 ಲಕ್ಷ ಕಾರ್ಡ್‍ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ಬಿ.ಮನಮೋಹನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಬಿ. ಮನಮೋಹನ, 2017ರಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯಡಿ 2.54 ಲಕ್ಷ ಸದಸ್ಯರುಗಳನ್ನು ನೋಂದಾಯಿಸಿದ್ದು, ಸುಮಾರು 7.50 ಕೋಟಿ ರೂ.ಗಳಿಗೂ ಅಧಿಕ ರಿಯಾಯಿತಿಯನ್ನು ಸದಸ್ಯರುಗಳಿಗೆ ನೀಡಲಾಗಿದೆ ಎಂದರು. ಈ ಯೋಜನೆ ಕರಾವಳಿ ಕರ್ನಾಟಕದಲ್ಲಿರುವ ಮಣಿಪಾಲ ಸಮೂಹದ 5 ಆಸ್ಪತ್ರೆಗಳಾದ ಕೆ.ಎಂ.ಸಿ. ಆಸ್ಪತ್ರೆಯ 2 ಶಾಖೆ, ಕಸ್ತೂರ್ ಬಾ ಆಸ್ಪತ್ರೆ, ಡಾ.ಟಿ.ಎಂ.ಎ. ಪೈ ಆಸ್ಪತ್ರೆ, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಹಾಗೂ ಮಣಿಪಾಲ ಮತ್ತು ಮಂಗಳೂರಿನ 2 ಡೆಂಟಲ್ ಕಾಲೇಜುಗಳಾದ ಮಣಿಪಾಲ್ ಡೆಂಟಲ್ ಕಾಲೇಜ್ ಆಫ್ ಸೈನ್ಸ್ ಇಲ್ಲಿ ಆರೋಗ್ಯ ಕಾರ್ಡ್‍ನ ಮೂಲಕ ರಿಯಾಯಿತಿ ಪಡೆಯಬಹುದಾಗಿದೆ.
ಪ್ರಸ್ತುತ ಕಾರ್ಡ್ ಪಡೆದ ಸದಸ್ಯರು ಆಗಸ್ಟ್ 1 ರಿಂದ 12 ತಿಂಗಳ ಕಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಕಾರ್ಡ್‍ನ ಶುಲ್ಕ ವ್ಯಕ್ತಿಗತ 250 ರೂ. ಹಾಗೂ ಕೌಟುಂಬಿಕ 520ರೂ.ಗಳಾಗಿದೆ. ಈ ಬಾರಿಯ ಸದಸ್ಯತ್ವ ನೋಂದಾವಣೆ ಶಿಬಿರ ಜುಲೈ 27 ರಂದು ಮಡಿಕೇರಿಯ ಕೋಟೆ ಮಹಿಳಾ ಸಮಾಜದಲ್ಲಿ ನಡೆಯಲಿದೆಯೆಂದು ಮನಮೋಹನ್ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಮೊ. 7022078005 ಮತ್ತು 7022078002 ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಏಜೆಂಟರುಗಳಾದ ವಿಜಯನ್ ಹಾಗೂ ಪುಷ್ಪಲತಾ ಅವರುಗಳು ಆರೋಗ್ಯ ಕಾರ್ಡ್‍ನಿಂದ ಜಿಲ್ಲೆಯ ರೋಗಿಗಳಿಗೆ ದೊರಕುತ್ತಿರುವ ಸೌಲಭ್ಯಗಳ ಮಾಹಿತಿ ನೀಡಿದರು.







