ಮಾಜಿ ಶಾಸಕ ವಸಂತ ಬಂಗೇರಾರೊಂದಿಗೆ ವಿಚಾರ ವಿನಿಮಯ

ಗುರುವಾಯನಕೆರೆ, ಜು.19: ಮಾಜಿ ಶಾಸಕ, ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿಯ ಸದಸ್ಯ ಕೆ. ವಸಂತ ಬಂಗೇರಾ ಅವರು ನಾಗರಿಕ ಸೇವಾ ಟ್ರಸ್ಟ್ ಮತ್ತು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಜಾಧಿಕಾರಿ ವೇದಿಕೆ-ಕರ್ನಾಟಕದ ಸಂಚಾಲಕರೊಂದಿಗೆ ಸಸ್ಯೋದ್ಯಾನದಲ್ಲಿ ಬುವಾರ ವಿಚಾರ ವಿನಿಮಯ ನಡೆಸಿದರು.
ಶೋಷಣೆಯ ವಿರುದ್ಧ, ಸಾಮಾಜಿಕ ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟದ ಕುರಿತು ಸಾಮಾಜಿಕ ಜಾಗೃತಿಯ ಪ್ರಗತಿ ಮತ್ತು ಮುಂದಿನ ಯೋಜನೆಯನ್ನು ಮಾಜಿ ಶಾಸಕರಿಗೆ ವಿವರಿಸಲಾಯಿತು.ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳನ್ನು ಭೇಟಿಮಾಡಿಸುವ ವ್ಯವಸ್ಥೆಯನ್ನು ಶೀಘ್ರ ಮಾಡುವುದಾಗಿ ಭರವಸೆ ನೀಡಿದ ವಸಂತ ಬಂಗೇರಾ ‘ನಾನು ಯಾರ ಮುಲಾಜಿಗೂ ಒಳಪಡದೆ ಸತ್ಯ-ನ್ಯಾಯದ ಪರವಾಗಿ ಇದ್ದೇನೆ. ಕಾನೂನು ಎಲ್ಲರಿಗೂ ಒಂದೇ’ ಎಂದರು.
ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಕ್, ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್, ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಪ್ರಜಾಧಿಕಾರ ವೇದಿಕೆ-ಕರ್ನಾಟಕ ರಾಜ್ಯ ಸಂಚಾಲಕ, ಕನಕಪುರದ ಶಿವರಾಜೇ ಗೌಡ, ಕರ್ನಾಟಕ ರಾಜ್ಯ ಗ್ರಾಮಾಭಿವೃದ್ಧಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ದಾವಣಗೆರೆಯ ಎಸ್.ಕುಮಾರ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಮತ್ತು ಕೆ. ಸೋಮ, ಟ್ರಸ್ಟ್ ಉಪಾಧ್ಯಕ್ಷೆ ವಿದ್ಯಾ ನಾಯಕ್, ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಬಾಲಕೃಷ್ಣ ಮಲೆಕುಡಿಯ, ಸದಸ್ಯರಾದ ಡಾ. ಕೃಷ್ಣಮೂರ್ತಿ, ಜೋಗಯ್ಯ ಮಲೆಕುಡಿಯ, ಕೃಷಿಕರ ವೇದಿಕೆಯ ಕಾರ್ಯದರ್ಶಿ ಸದಾಶಿವ ಹೆಗ್ಡೆ, ಟ್ರಸ್ಟಿ ದಯಾನಂದ ಪೂಜಾರಿ, ಸಂಯೋಜಕ ಬಾಬು ಎ. ಉಪಸ್ಥಿತರಿದ್ದರು.







