ತೋಡಿಗೆ ಜಾರಿಬಿದ್ದು ನಾಪತ್ತೆಯಾದ ವ್ಯಕ್ತಿಯ ಮೃತದೇಹ ನಡುಮೊಗರು ನೇತ್ರಾವತಿ ನದಿತಟದಲ್ಲಿ ಪತ್ತೆ

ಬಂಟ್ವಾಳ, ಜು. 19: ಬಂಟ್ವಾಳ ತಾಲೂಕು ಉಳಿ ಗ್ರಾಮದ ಬನತ್ತಪಲ್ಕೆಯಲ್ಲಿ ಮಂಗಳವಾರ ಸಂಜೆ ತೋಡಿಗೆ ಜಾರಿಬಿದ್ದು ನಾಪತ್ತೆಯಾದ ಅಹ್ಮದ್ ಬ್ಯಾರಿ ಅವರ ಮೃತದೇಹವು ನಡುಮೊಗರು ನೇತ್ರಾವತಿ ನದಿತಟದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಬುಧವಾರ ಬೆಳಿಗ್ಗಿನಿಂದಲೇ ಬಂಟ್ವಾಳ ಅಗ್ನಿ ಶಾಮಕದಳ ಮತ್ತು ಈಜುಗಾರರ ತಂಡ ಉಳಿಯಲ್ಲಿನ ದೊಡ್ಡ ತೋಡಿನಿಂದ ಸರಪಾಡಿ ಎಎಂಆರ್ ಡ್ಯಾಂವರೆಗೆ ಹುಡುಕಾಟ ನಡೆಸಿದ್ದರೂ ಫಲಪ್ರದವಾಗಿಲ್ಲ. ಗುರುವಾರ ಸಂಜೆ ಹೊತ್ತಿಗೆ ನಡುಮೊಗರು ನೇತ್ರಾವತಿ ನದಿತಟದಲ್ಲಿ ಮತ್ತೆ ಶೋಧ ಕಾರ್ಯ ಮುಂದುವರಿಸಿದ ತಂಡವು ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಘಟನೆಯ ಹಿನ್ನೆಲೆ:
ಅಹ್ಮದ್ ಬ್ಯಾರಿ ಅವರು ಮಂಗವಾರ ಸಂಜೆ ಸುಮಾರು 5ಗಂಟೆ ಹೊತ್ತಿಗೆ ತಮ್ಮ ತೋಟದಿಂದ ಹಸುಗಳಿಗೆ ಹುಲ್ಲುಗಳನ್ನು ತೆಗೆಯಲು ಹೋಗಿದ್ದರು. ತೋಟದ ತೋಡಿನ ಬದಿಯಲ್ಲಿ ಹುಲ್ಲು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು. ರಾತ್ರಿಯಾದರೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಾಡಿದಾಗ ತೋಡಿನ ಬದಿಯಲ್ಲಿ ಕತ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆಯಿಂದ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ತದನಂತರ ಅಹ್ಮದ್ ಅವರ ಪುತ್ರ ಇಸ್ಮಾಯಿಲ್ ಎಂಬವರು ಪುಂಜಾಲಕಟ್ಟೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ಪುಂಜಾಲಕಟ್ಟೆ ಠಾಣಾಧಿಕಾರಿ ಸತೀಶ್ ಬಲ್ಲಾಳ್ ಮತ್ತು ಸಿಬಂದಿ, ಜಿಪಂ ಸದಸ್ಯ ಬಿ. ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ತಾಪಂ ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಹುಡುಕಾಟ ನಡೆಸುವವರಿಗೆ ಸಹಕಾರ ನೀಡಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬುಧವಾರ ರಾತ್ರಿ ಅಹಮ್ಮದ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.







