ಸುಳ್ಯ: ಗೃಹರಕ್ಷಕದಳದಿಂದ ವನಮಹೋತ್ಸವ

ಮಂಗಳೂರು, ಜು.19: ಸುಳ್ಯ ಘಟಕದ ಕಚೇರಿಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರವಾಹ ರಕ್ಷಣಾನಿರತ ಗೃಹರಕ್ಷಕರಿಗೆ ರೈನ್‌ಕೋಟ್ ಹಾಗೂ ಬೂಟ್‌ಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ಮುರಲಿ ಮೋಹನ್ ಚೂಂತಾರು ವಹಿಸಿ ಮಾತನಾಡಿ, ಹಸಿರೀಕರಣದಿಂದ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಸಾಧ್ಯವೆಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಸಮಾದೇಷ್ಟ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣಾ ನಿಟ್ಟಿನಲ್ಲಿ ಪ್ರತಿಯೊಬ್ಬ ಗೃಹರಕ್ಷಕರು ಕೂಡ ಒಂದೊಂದು ಸಸಿಯನ್ನು ನೆಟ್ಟು ಪೋಷಿಸಬೇಕು ಎಂದು ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಉಪಸಮಾದೇಷ್ಟ ರಮೇಶ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಫ್ಯಾಕ್ಟರಿ ವಿಭಾಗದ ವಿಭಾಗಾಧಿಕಾರಿ ರಂಗನಾಥ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ, ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ನಟರಾಜ್, ನಿವೃತ್ತ ಘಟಕಾಧಿಕಾರಿ ರಾಮಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಘಟಕಾಧಿಕಾರಿ ಜಯಂತ್ ಶೆಟ್ಟಿ ಸ್ವಾಗತಿಸಿದರು. ಸುಳ್ಯ ಘಟಕದ ಅಬ್ದುಲ್ ಗಫೂರ್ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಘಟಕದ ಗೃಹರಕ್ಷಕ-ಗೃಹರಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







