ಸಂಚಾರ ಪೊಲೀಸರಿಂದ ಕಿರುಕುಳ ಆರೋಪ: ಆಟೋ-ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಬೆಂಗಳೂರು, ಜು.19: ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ನಗರ ಸಂಚಾರ ಪೊಲೀಸರು ಆಟೊ ಚಾಲಕರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿ ಪೀಸ್ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಗುರುವಾರ ಪುರಭವನದ ಎದುರು ಜಮಾಯಿಸಿದ ಸಂಘಟನೆ ಸದಸ್ಯರು, ಕಳೆದ ಹದಿನೈದು ದಿನಗಳಿಂದ ನಗರ ಸಂಚಾರ ಪೊಲೀಸರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ರಘು, ರಸ್ತೆಗಳಲ್ಲಿ ಆಟೊಗಳನ್ನು ಜಪ್ತಿ ಮಾಡಿ ಎರಡರಿಂದ ನಾಲ್ಕು ಸಾವಿರ ರು. ದಂಡ ವಿಧಿಸುತ್ತಿದ್ದಾರೆ. ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳಾದ ಒಲಾ, ಉಬರ್ ಸಂಸ್ಥೆಗಳ ಅಡಿಯಲ್ಲಿ ಓಡಿಸುತ್ತಿರುವ ಆಟೊಗಳನ್ನು ಗುರಿಯಾಗಿಸಿಕೊಂಡು ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
ಕೆಲ ಆಟೊ ಚಾಲಕರ ಬಳಿ ಬ್ಯಾಡ್ಜ್‌ಗಳಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಬ್ಯಾಡ್ಜ್ ಮಾಡಿಸಲು ನಮ್ಮದೇನು ಅಭ್ಯಂತರವಿಲ್ಲ. ಅದಕ್ಕೆ ಸಮಯಾವಕಾಶ ನೀಡಬೇಕು. ಏಕಾಏಕಿ ಜಪ್ತಿ ಮಾಡಿ, ದಂಡ ವಿಧಿಸುವುದರಿಂದ ಆ ಕುಟುಂಬಗಳು ಬೀದಿಗೆ ಬರುತ್ತವೆ. ಹಾಗಾಗಿ ನಗರ ಸಂಚಾರ ಪೊಲೀಸರು ಕೂಡಲೇ ಈ ದೌರ್ಜನ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.





