ಕ್ರೈಸ್ತ ಧರ್ಮದಲ್ಲೂ ತಾರತಮ್ಯ: ಡಾ.ನಾ.ಡಿಸೋಜ
ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಮಾಲೆ ಸಮೂಹ ಮಂಥನ ಮತ್ತು ಸಂವಾದ ಕಾರ್ಯಕ್ರಮ

ಬೆಂಗಳೂರು, ಜು. 19: ಮತಾಂತರಗೊಂಡ ಕ್ರೈಸ್ತರು ಹಾಗೂ ನೈಜ ಕ್ರೈಸ್ತರ ನಡುವೆ ತಾರತಮ್ಯ ಧೋರಣೆಯಿದ್ದು, ಕೀಳರಿಮೆಯಿಂದ ಅನೇಕರು ನಲುಗಿದರು ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ, ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಮಾಲೆ ಸಮೂಹ ಮಂಥನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆಯಲ್ಲಿ ಕ್ರೈಸ್ತ ಮಿಷನರಿಗಳು ಧರ್ಮದ ಪ್ರಚಾರದ ಜೊತೆಗೆ ಹಲವಾರು ದಲಿತರನ್ನು ತಮ್ಮ ಧರ್ಮಕ್ಕೆ ಮತಾಂತರಿಸಿದರು. ಮತಾಂತರಗೊಂಡ ಕ್ರೈಸ್ತರು ಹಾಗೂ ನೈಜ ಕ್ರೈಸ್ತರ ನಡುವೆ ತಾರತಮ್ಯ ಧೋರಣೆ ತೋರಲಾಯಿತು. ಜೊತೆಗೆ ಯಾವುದೇ ಮೀಸಲಾತಿ ಕಲ್ಪಿಸದೆ, ಕೀಳರಿಮೆಯಿಂದ ನಲುಗಿದರು ಎಂದು ಹೇಳಿದರು.
ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಾದ ತಳಮಳ, ಸಾಮಾಜಿಕ, ನೈತಿಕ, ಧಾರ್ಮಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಇದು ವೇದಿಕೆಯಾಗಬಲ್ಲದು. ಜಾತಿ ತೊಡೆದು ಹಾಕಿ ಬಾಳ್ವೆ ನಡೆಸಲು ಮುಂದಾಗಿರುವ ಸಮಾಜದ ನಡುವೆಯೇ ಇನ್ನೂ ಜಾತಿ ಪದ್ದತಿ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸತ್ಯ ಸಂಗತಿಗಳ ಆಧಾರದ ಮೇಲೆ ಸಂಶೋಧನೆ ನಡೆಸಿ ಸೂಕ್ತ ಫಲಿತಾಂಶದ ನಿರೀಕ್ಷೆ ಮಾಡಬೇಕಿದೆ ಎಂದ ಅವರು, ದಲಿತರು ಬದುಕಿನಲ್ಲಿ ಕಂಡ ನೈಜ ಸಂಗತಿಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇವರ ಬಗ್ಗೆ ಸಂಶೋಧನೆ ಈ ಹಿಂದೆಯೇ ನಡೆಯಬೇಕಿದ್ದು, ಈಗ ಸಂಶೋಧನಾ ಸಂಪುಟಗಳನ್ನು ಹೊರ ತರುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧಮಾಲೆ ಸಮೂಹ ಮಂಥನ ರಾಜ್ಯದ 4 ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ನಡೆಯಲಿದೆ. ಇಲ್ಲಿ ವಿಭಾಗವಾರು ಸಮೂಹ ಮಂಥನ ಕ್ಷೇತ್ರಕಾರ್ಯ ಹಾಗೂ ಅಧ್ಯಯನಗಳು ನಡೆಯಲಿದ್ದು, ವಿಭಾಗವಾರು ತಲಾ ಒಬ್ಬ ಸಂಪಾದಕರು ಹಾಗೂ ಎಲ್ಲ ಜಿಲ್ಲೆಗಳಿಂದ ಸಂಶೋಧಕರನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಶೋಧನೆ ಮಾಲಿಕೆಯ ಸಂಯೋಜಕರಾದ ಡಾ.ಕೆ. ಖಂಡೋಬಾ, ಡಾ.ಪ್ರಶಾಂತ್ ನಾಯಕ್, ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್ ಸೇರಿ ಪ್ರಮುಖರಿದ್ದರು.







