ಸುಝ್ಲಾನ್ ನ ಉಳಿದ ಜಮೀನು ಡಿನೋಟಿಫೈ ಮಾಡಲು ಮಾತುಕತೆ : ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ,ಜು.19: ಸುಝ್ಲಾನ್ ಯೋಜನೆಗಳಿಗೆ ನೀಡಿದ ಜಮೀನಿನಲ್ಲಿ ಬಳಕೆಯಾಗದೆ ಇರುವ ಉಳಿದ ಭೂಮಿಯನ್ನು ಡಿನೋಟಿಫೈ ಮಾಡಲು ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಗುರುವಾರ ಭೇಟಿ ನೀಡಿದ ಅವರು, ಗ್ರಾಮ ಪಂಚಾಯತ್ ನ ವಿವಿಧ ಬೇಡಿಕೆಯ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದರು.
ಸುಝ್ಲಾನ್ ಕಂಪೆನಿಗೆ ನೀಡಿದ ಜಮೀನನಲ್ಲಿ ಹೆಚ್ಚುವರಿಯಾಗಿರುವ ಜಮೀನನ್ನು ಅನ್ಯರಿಗೆ ಮಾರಾಟ ಮಾಡಿ ಲಾಭಗಳಿಸುವ ಯತ್ನ ನಡೆಯುತಿದೆ ಎಂದು ಆರೋಪಿಸಿದ ಅವರು, ಡಿನೋಟಿಫೈ ಮಾಡಿದ ಜಮೀನನ್ನು ಪಡುಬಿದ್ರಿ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಬೇಡಿಕೆಗಳು: ಪಡುಬಿದ್ರಿ ಘನ ಹಾಗೂ ದ್ರವ ತ್ಯಾಜ್ಯ ಕಟ್ಟಡಕ್ಕೆ 5 ಎಕ್ರೆ ಜಮೀನು ಮಂಜೂರಾಗಬೇಕು. ಗ್ರಾಮ ಪಂಚಾಯತ್ ಕಟ್ಟಡದ ಒಂದನೇ ಮಹಡಿ ಕಟ್ಟಡ ರಚನೆಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ಒದಗಿಸಬೇಕು. ಸುಜ್ಲಾನ್ ಕಂಪೆನಿಗೆ ನೀಡಿದ ಜಮೀನಿನಲ್ಲಿ 25ಎಕ್ರೆ ಸ್ಥಳವನ್ನು ಹಿಂದಕ್ಕೆ ಪಡೆದು ಗ್ರಾಮ ಪಂಚಾಯತ್ ವ್ಯಾಪ್ತಿಯ 1000ಕ್ಕೂ ಅಧಿಕ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಕ್ರಮಕೈಗೊಳ್ಳಬೇಕು. ಪಡುಬಿದ್ರಿ ಹಾಗೂ ಪಾದೆಬೆಟ್ಟು ಗ್ರಾಮಗಳ ರಸ್ತೆ ಸೇತುವೆ, ಕಿಂಡಿ ಅಣೆಕಟ್ಟು, ಕಾಪು ಸಂಕಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪಂಚಾಯ್ತಿ ಅಧ್ಯಕ್ಷೆ ದಮಯಂತಿ ವಿ. ಅಮೀನ್ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್, ಉಪಾಧ್ಯಕ್ಷ ವೈ.ಸುಕುಮಾರ್, ಪಿಡಿಓ ಪಂಚಾಕ್ಷರಿ ಕೇರಿಮಠ್ ಉಪಸ್ಥಿತರಿದ್ದರು.







