ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಕೇಂದ್ರ ಸರಕಾರದ ಪ್ರಾಯೋಜಿತ ದಾಳಿ: ಮರುಳಸಿದ್ದಪ್ಪ
ಸಂಘಪರಿವಾರದ ವಿರುದ್ಧ ಪ್ರಗತಿಪರರಿಂದ ಪ್ರತಿಭಟನೆ

ಬೆಂಗಳೂರು, ಜು.19: ಸಂಘಪರಿವಾರದ ಸಂಘಟನೆಗಳು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ನಡೆಸಿರುವ ಹಲ್ಲೆಯು ಕೇಂದ್ರ ಸರಕಾರದ ಪ್ರಾಯೋಜಿತ ದಾಳಿಯೆಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಖಂಡಿಸಿದ್ದಾರೆ.
ಗುರುವಾರ ಸಾಮಾಜಿಕ ಹೋರಾಟಗಾರ, ಆಧ್ಯಾತ್ಮಿಕ ಚಿಂತಕ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಯುವಮೋರ್ಚಾ, ಭಜರಂಗ ದಳ, ಎಬಿವಿಪಿ ಸೇರಿದಂತೆ ಕೋಮುವಾದಿ ಶಕ್ತಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ನಗರದ ಪುರಭವನದ ಮುಂಭಾಗ ಪ್ರಗತಿಪರ ಸಂಘಟನೆಗಳ ಮುಖಂಡರು, ಬರಹಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಸಂಘಪರಿವಾರವೆಂಬ ಗೂಂಡಾ ಪಡೆಯನ್ನು ಕಟ್ಟಿಕೊಂಡು ಪ್ರಗತಿಪರ ಮುಖಂಡರಿಗೆ ಬೆದರಿಕೆ, ಹಲ್ಲೆ ಅಂತಿಮವಾಗಿ ಕೊಲೆ ಮಾಡಿಸುವಂತಹ ಕೃತ್ಯದಲ್ಲಿ ತೊಡಗಿದೆ. ಇವರು ನಡೆಸುವ ಹಲ್ಲೆಗಳಿಗೆ ಪ್ರಗತಿಪರರು ಜಗ್ಗುವುದಿಲ್ಲವೆಂದು ನಾವು ಸಾಬೀತು ಪಡಿಸಬೇಕಾಗಿದೆ. ಆ ಮೂಲಕ ಸಂಘಪರಿವಾರದ ಎಲ್ಲ ರೀತಿಯ ದೌರ್ಜನ್ಯಗಳನ್ನು ದಿಟ್ಟತನದಿಂದ ಎದುರಿಸಲು ನಾವು ಸಜ್ಜುಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಪ್ರತಿದಿನ ಮುಸ್ಲಿಮ್, ದಲಿತರು ಹಾಗೂ ಜಾತ್ಯತೀತ ಚಿಂತನೆಗಳನ್ನು ಅಭಿವ್ಯಕ್ತಿಸುವವರ ಮೇಲೆ ದಾಳಿಗಳು ನಡೆಯುತ್ತಿವೆ. ಅದರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಕಳೆದ 4 ವರ್ಷಗಳಿಂದ ಹಲ್ಲೆಗಳು ಮಿರಿ ಮೀರಿವೆ. ಈ ಹಲ್ಲೆಗಳ ವಿರುದ್ಧ ಕೇಂದ್ರ ಸರಕಾರ ಯಾವೊಂದು ಪ್ರತಿಕ್ರಿಯೆ ನೀಡದೆ ವೌನ ವಹಿಸಿರುವುದನ್ನು ಗಮನಿಸಿದರೆ, ಈ ಹಲ್ಲೆಗಳ ಹಿಂದೆ ಬಿಜೆಪಿ ಸರಕಾರದ ಬೆಂಬಲ ಇರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಮಾತನಾಡಿ, ಸಂಘಪರಿವಾರ ತಮ್ಮ ಸಿದ್ಧಾಂತದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರೆಲ್ಲರನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿ ಹೋಗುತ್ತಿದ್ದು, ಇದು ಸಂವಿಧಾನದ ಮೂಲ ಆಶಯ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುವಂತಹದ್ದಾಗಿದೆ. ಸಂಘಪರಿವಾರದ ಈ ಕೃತ್ಯಗಳ ವಿರುದ್ಧ ದೇಶಾದ್ಯಂತ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಮುಕ್ತ ಅವಕಾಶ ನೀಡಿದೆ. ದೇಶದ ಐಕ್ಯತೆಗೆ ಧಕ್ಕೆ ತರುವಂತಹ ವಿಷಯವನ್ನು ಹೊರತು ಪಡಿಸಿ, ಮತ್ಯಾವುದೆ ಚಿಂತನೆಯನ್ನು ಹಂಚಿಕೊಳ್ಳಬಹುದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಖಾಸಗಿ ಗೂಂಡಾ ಪಡೆಗಳು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಮುಂದಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕೋಮುವಾದಿಗಳು ಶಕ್ತಿಗಳು ತಮ್ಮ ದುಷ್ಕೃತ್ಯಗಳಿಗೆ ತಳ ಸಮುದಾಯದ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿವೆ. ಆ ಮೂಲಕ ತಳ ಸಮುದಾಯಗಳ ನಡುವೆಯೆ ದ್ವೇಷ ಬಿತ್ತುವಂತಹ ಕಾರ್ಯದಲ್ಲಿ ನಿರತವಾಗಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತೆ ವಿಜಯಮ್ಮ, ಹೋರಾಟಗಾರರಾದ ಶಿವಸುಂದರ್, ಮಂಗ್ಳೂರು ವಿಜಯ, ಮಲ್ಲಿಗೆ, ಕೆ.ಎಸ್.ವಿಮಲಾ, ಶ್ರೀಪಾದ್ ಭಟ್, ಅನಂತ ನಾಯ್ಕ, ವಡ್ಡಗೆರೆ ನಾಗರಾಜಯ್ಯ, ಕೆ.ವಿ.ನಾಗರಾಜಯ್ಯ ಸೇರಿದಂತೆ ನೂರಾರು ಪ್ರಗತಿಪರ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಯನ್ನು ನಾವೆಲ್ಲರೂ ಖಂಡಿಸುತ್ತಲೆ, ಸ್ವಾಮಿ ಅಗ್ನಿವೇಶ್‌ರವರ ಧೈರ್ಯವನ್ನು ನಾವು ಅನುಕರಿಸಬೇಕು. ಮುಂದಿನ ದಿನಗಳಲ್ಲಿ ದೇಶಾದ್ಯಂತ ಸಾವಿರಾರು ಸ್ವಾಮಿ ಅಗ್ನಿವೇಶ್‌ಗಳು ಹುಟ್ಟಬೇಕು. ಆ ಮೂಲಕ ಸಂಘಪರಿವಾರದ ಷಡ್ಯಂತ್ರಗಳಿಗೆ ದಿಟ್ಟತನವಾಗಿ ಉತ್ತರಿಸಬೇಕಾಗಿದೆ.
-ಮರುಳಸಿದ್ಧಪ್ಪ ಅಧ್ಯಕ್ಷ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಅಮಾಯಕರ ಮೇಲೆ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕಾನೂನು ರಚಿಸಬೇಕಾದ ಅಗತ್ಯವಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ, ಗುಂಪು ಹಲ್ಲೆಗಳ ವಿರುದ್ಧ ಹೊಸ ಕಾನೂನು ಅಗತ್ಯವಿಲ್ಲವೆಂದಿದೆ. ಈ ಗುಂಪು ಹಲ್ಲೆಗಳಲ್ಲಿ ಭಾಗಿಗಳಾಗುವವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರೆ ಆಗಿರುತ್ತಾರೆ. ಹೀಗಾಗಿ ಗುಂಪು ಹಲ್ಲೆಗಳ ವಿರುದ್ಧ ಹೊಸ ಕಾನೂನು ರಚನೆಗೆ ಒತ್ತಾಯಿಸಬೇಕಾಗಿದೆ.
-ರವಿವರ್ಮ ಕುಮಾರ್, ಮಾಜಿ ಅಡ್ವೊಕೇಟ್ ಜನರಲ್







