ಶಿರೂರು ಸ್ವಾಮೀಜಿ ಸಾವಿನ ತನಿಖೆ ನಡೆಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಿದ್ದೇನೆ : ಪ್ರಮೋದ್ ಮಧ್ವರಾಜ್
"ಪ್ರಕರಣದಲ್ಲಿ ಅನೇಕ ಸಂಶಯಗಳಿವೆ"

ಉಡುಪಿ, ಜು.19: ಶಿರೂರು ಸ್ವಾಮೀಜಿಯ ಸಾವಿನ ಕಾರಣದ ಬಗ್ಗೆ ಅನೇಕ ಸಂಶಯಗಳಿದ್ದು, ಈ ಬಗ್ಗೆ ಗೃಹ ಸಚಿವರೊಂದಿಗೆ ಮಾತನಾಡಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೇನೆ. ಅಲ್ಲದೆ ಎಸ್ಪಿ, ಐಜಿಪಿ ಜೊತೆಯೂ ಮಾತನಾಡಿದ್ದೇನೆ. ಯಾರ ಮೇಲೆ ಗೂಬೆಗೂರಿಸುವ ಅನುಮಾನ ವ್ಯಕ್ತಪಡಿಸುವ ಕೆಲಸ ಮಾಡಬಾರದು. ಆದರೆ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಎಷ್ಟೇ ಶ್ರೇಷ್ಠ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10-15 ದಿನಗಳ ಹಿಂದೆ ಸ್ವಾಮೀಜಿ ನನ್ನ ಜೊತೆ ಮಾತನಾಡಿ ನನ್ನ ಪಟ್ಟದ ದೇವರನ್ನು ವಾಪಾಸ್ಸು ಕೊಡಿಸಬೇಕು ಎಂದು ಹೇಳಿದ್ದರು. ಸೋದೆ ಹಾಗೂ ಪಲಿಮಾರು ಸ್ವಾಮೀಜಿ ಕೂಡ ಆ ವಿಚಾರವಾಗಿ ನನ್ನ ಜೊತೆ ಮಾತನಾಡಿದ್ದರು. ನಾನು ಮಾತುಕತೆಯ ಮೂಲಕ ಬಗೆಹರಿಸಿ, ಮಠ, ದೇವರ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಒಳ್ಳೆಯದಲ್ಲ ಎಂದು ಮೂವರು ಸ್ವಾಮೀಜಿಗಳಿಗೂ ಸಲಹೆಯನ್ನು ನೀಡಿದ್ದೆ ಎಂದರು.
ಕೆಳಜಾತಿಯವನನ್ನು ಅಧ್ಯಕ್ಷ ಮಾಡಿದ್ದರು.
ಶಿರೂರು ಸ್ವಾಮೀಜಿ ತನ್ನ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. ಸಾಮಾನ್ಯವಾಗಿ ಬೇರೆ ಬೇರೆ ಪರ್ಯಾಯ ದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮೇಲ್ಜಾತಿಯವರನ್ನೇ ಆಯ್ಕೆ ಮಾಡಲಾಗುತ್ತದೆ. ಮೊದಲ ಬಾರಿಗೆ ಕೆಳಜಾತಿಯವನಾದ ನನ್ನನ್ನು ನೇಮಕ ಮಾಡುವ ಮೂಲಕ ಶಿರೂರು ಸ್ವಾಮೀಜಿ ಜಾತಿ ಕಟ್ಟಲೆಯನ್ನು ಮೀರಿ ನಿಂತಿದ್ದರು. ಉಡುಪಿಯಲ್ಲಿ ಬರಗಾಲ ಬಂದಾಗ ಶಿರೂರಿನ ಸ್ವರ್ಣ ನದಿಯಿಂದ ನೀರು ಪಂಪ್ ಮಾಡಲು ರೈತರ ಮನವರಿಕೆ ಮಾಡಿ ಸಮಸ್ಯೆ ಬಗೆಹರಿಸಿದ್ದರು ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.







