ಪೊಳಲಿ ಕ್ಯಾಂಡಲ್ ಸಂತೋಷ್ ಕೊಲೆ ಪ್ರಕರಣ : ಸೆಶನ್ಸ್ ನ್ಯಾಯಾಲಯದಿಂದ ಆರೋಪಿಗಳ ವಿಚಾರಣೆ
ಮಂಗಳೂರು, ಜು.19: ಪೊಳಲಿ ಕ್ಯಾಂಡಲ್ ಸಂತು ಯಾನೆ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಹೆಚ್ಚುವರಿ ಮಂಗಳೂರು ಸೆಶನ್ಸ್ ನ್ಯಾಯಾಲಯ ಇಬ್ಬರು ಪ್ರಮುಖ ಆರೋಪಿಗಳ ವಿಚಾರಣೆ ನಡೆಸಿದೆ. ಆದರೆ ಈ ಕುರಿತು ಯಾವುದೇ ತೀರ್ಪು ಪ್ರಕಟಿಸಿಲ್ಲ.
2009ರಲ್ಲಿ ಬಂಟ್ವಾಳ ತಾಲೂಕಿನ ಬಡಕಬೈಲು ನಿವಾಸಿ ಕ್ಯಾಂಡಲ್ ಸಂತು ಅವರನ್ನು ಬಡಕಬೈಲುಬಮೋರಿಯಲ್ಲಿ ಕುಳಿತುಕೊಂಡಿದ್ದ ವೇಳೆ ಬೆಳಗ್ಗೆ ಸುಮಾರು 10 ಗಂಟೆಗೆ ಕಪ್ಪು ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ಆರೋಪಿಗಳಿದ್ದು, ಈ ಪೈಕಿ ಬಂದರು ನಿವಾಸಿ ಇಕ್ಬಾಲ್, ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಫಾರೂಕ್ ಅವರನ್ನು ಮಂಗಳೂರು ನ್ಯಾಯಾಲಯ ವಿಚಾರಣೆ ನಡೆಸಿತು.
ಪ್ರಕರಣದ ನಾಲ್ಕು ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಾಡೂರು ಇಸುಬು ಜೈಲಿನಲ್ಲಿ ಕೊಲೆಯಾದರೆ, ಮಾಡೂರು ಇಸ್ಮಾಯೀಲ್ ಹೃದಯಾಘಾತಗೊಂಡು ಮರಣಹೊಂದಿದ್ದಾರೆ. ಕುಕ್ಕಂದರೂರು ನಿವಾಸಿ ಸುಲೇಮಾನ್ ಯಾನೆ ಖಾದರ್ ಕಾರ್ಕಳದಲ್ಲಿ ಕೊಲೆಯಾದರೆ, ವಾಮಂಜೂರು ನಿವಾಸಿ ಮುಹಮ್ಮದ್ ಕಬೀರ್ ವಾಮಂಜೂರಿನಲ್ಲಿ ಕೊಲೆಯಾಗಿದ್ದರು.
ಉಳಿದಂತೆ ಅಬ್ಬಾಸ್ ಬಂಟ್ವಾಳ, ಇಸಾಕ್ ಬಂಟ್ವಾಳ, ಹಬೀದ್ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆಗಿನ ಸಿ.ಐ.ನಂಜುಂಡೇಗೌಡ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಸರಕಾರಿ ಅಭಿಯೋಜಕ ಹರಿಶ್ವಂದ್ರ ಉದಯವಾರ್ ಸರಕಾರದ ಪರ ವಾದಿಸಿದ್ದರು. ಬಂಟ್ವಾಳ ಪ್ರಸ್ತುತ ಸಿಐ ಟಿ.ಡಿ. ನಾಗರಾಜ್ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಪ್ರಮುಖ ಪಾತ್ರವಹಿಸಿದ್ದರು.







