ಲೈಂಗಿಕ ಶೋಷಣೆ ಆರೋಪ: ಇಬ್ಬರು ಪಾದ್ರಿಗಳಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ತಿರುವಲ್ಲ, ಜು.19: ಮಹಿಳೆಯೊಬ್ಬರನ್ನು ಲೈಂಗಿಕ ಶೋಷಣೆಗೊಳಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಇಬ್ಬರು ಪಾದ್ರಿಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರು ಪಾದ್ರಿಗಳ ಪೈಕಿ ಫಾದರ್ ಜಾಬ್ ಮ್ಯಾಥ್ಯೂ ಮತ್ತು ಫಾದರ್ ಜಾನ್ಸನ್ ವಿ.ಮ್ಯಾಥ್ಯೂರನ್ನು ಕಳೆದ ವಾರ ಬಂಧಿಸಲಾಗಿತ್ತು. ಇವರಿಬ್ಬರು ಜಾಮೀನು ಕೋರಿ ತಿರುವಲ್ಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಇವರಿಬ್ಬರೂ ಸದ್ಯ ಪಟ್ಟಣಂತಿಟ್ಟ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಐವರು ಪಾದ್ರಿಗಳು ದಶಕಗಳಿಂದ ತನ್ನ ಲೈಂಗಿಕ ಶೋಷಣೆ ನಡೆಸಿಕೊಂಡು ಬಂದಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೊದಲಿಗೆ ಒಬ್ಬರು ಪಾದ್ರಿ ಅತ್ಯಾಚಾರ ನಡೆಸಿದ್ದು ನಂತರ ಇತರ ಪಾದ್ರಿಗಳಿಗೂ ನನ್ನನ್ನು ಆತ್ಯಾಚಾರ ಮಾಡುವಂತೆ ಪ್ರೇರೇಪಿಸಿದ್ದಾರೆ. ಇವರೆಲ್ಲರೂ ನನ್ನನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ದಶಕಗಳಿಂದಲೂ ನಿರಂತರವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಫಾದರ್ ಸೋನಿ ವರ್ಗೀಸ್ (ಅಬ್ರಹಾಂ) ಮತ್ತು ಫಾದರ್ ಜೈಸ್ ಕೆ.ಜಾರ್ಜ್ ಸದ್ಯ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.







