ದಾವಣಗೆರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಿಪಿಕ ನೌಕರರ ಸಂಘದ ಉದ್ಘಾಟನಾ ಸಮಾರಂಭ

ದಾವಣಗೆರೆ,ಜು.19: ಆರೋಗ್ಯ ಇಲಾಖೆ ನೌಕರರದ್ದು ಒಂದು ರೀತಿಯ ತುರ್ತು ಸೇವೆ ಇದ್ದಂತೆ. ಲಿಪಿಕ ನೌಕರರು ದಿನದ 24 ಗಂಟೆ ಕಾರ್ಯನಿರ್ವಹಿಸದೇ ಇರಬಹುದು. ಆದರೆ, 24 ಗಂಟೆ ನಿರ್ವಹಿಸುವ ಇತರೆ ಸಿಬ್ಬಂದಿಗೆ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಹೇಳಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಿಪಿಕ ನೌಕರರ ಸಂಘದ ಉದ್ಘಾಟನಾ ಸಮಾರಂಭ, ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಲಿಪಿಕ ನೌಕರರು ಬೇರೆ ಇತರರು ಬೇರೆ ಎಂಬ ಭಾವನೆ ಬೇಡ. ಎಲ್ಲಾ ನೌಕರರು ಸರ್ಕಾರದ ಒಂದು ಭಾಗ. ಆದ್ದರಿಂದ ಎಲ್ಲರೂ ಒಟ್ಟಾಗಿ ಕೈಜೋಡಿಸುವ ಮುಖಾ ಜನತೆಗೆ ಸುರಕ್ಷಿತ ಆರೋಗ್ಯ ಸೇವೆ ನೀಡಿ, ಆರೋಗ್ಯ ಸಮಾಜ ನಿರ್ಮಿಸಬೇಕೆಂದ ಅವರು, ನಮ್ಮ ಸಮಾಜದಲ್ಲಿ ಸಂಘಗಳಿಗೆ ಕೊರತೆಯಿಲ್ಲ. ಆದರೆ, ಸಂಘದ ಮುಖ್ಯ ಉದ್ದೇಶಗಳೇನು ಎಂಬುದನ್ನು ಎಲ್ಲರು ಮೊದಲು ಮನಗಾಣಬೇಕು. ಸರ್ಕಾರಿ ನೌಕರರನ್ನು ನೌಕರರಲ್ಲದೇ ಇರುವ ಶೇ. 90ರಷ್ಟು ಜನ ಗಮನಿಸುತ್ತಿರುತ್ತಾರೆ. ಆದ್ದರಿಂದ ಅವರಿಗೆ ನಾವು ಯಾವ ಸೇವೆ ನೀಡುತ್ತೇವೆ ಎಂಬುದು ಮುಖ್ಯ. ಇತರರಿಗೆ ಹೋಲಿಸಿದರೆ ಸರ್ಕಾರಿ ನೌಕರರು ಪುಣ್ಯವಂತರು. ಸರ್ಕಾರದಿಂದ ಎಲ್ಲಾ ಸವಲತ್ತು ಪಡೆಯುತ್ತೇವೆ. ಆದರೆ, ಸವಲತ್ತು ನೀಡಿದ ಸಮಾಜಕ್ಕೆ ನಾವೇನು ನೀಡುತ್ತೇವೆ ಎಂಬುದು ಅತೀಮುಖ್ಯ ಎಂದರು.
ನಿವೃತ್ತಿಯ ನಂತರ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ಯಾರೂ ನಿಮ್ಮನ್ನು ಕೇಳುವುದಿಲ್ಲ. ಆದ್ದರಿಂದ ಕೆಲಸದ ಒತ್ತಡದ ನಡುವೆಯೂ ನಿಮ್ಮ ನಿಮ್ಮ ಕುಟುಂಬಕ್ಕೂ ಆದ್ಯತೆ ಹಾಗೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು.
ಸಂಘದ ಗೌರವಾಧ್ಯಕ್ಷ ನಿಜಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಘ ನೌಕರರ ಹಿತರಕ್ಷಣೆಯ ಜೊತೆಗೆ ಇಲಾಖೆ, ಜಿಲ್ಲಾಡಳಿತ, ಆಸ್ಪತ್ರೆಗೆ ಪೂರಕವಾಗಿ ಸಹ ಕಾರ್ಯನಿರ್ವಹಿಸಬೇಕು. ಸಂಘದಿಂದ ವಿಶೇಷ ಕಾರ್ಯಾಗಾರ, ಪುರಸ್ಕಾರ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ತ್ರಿಪುಲಾಂಭ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ ಎಚ್.ಡಿ., ಆರೋಗ್ಯ ಮತ್ತು ಕು.ಕ. ಇಲಾಖೆ ಲಿಪಿಕ ನೌಕರರ ಸಂಘದ ಕಾರ್ಯಾಧ್ಯಕ್ಷ ಎ. ಪುಟ್ಟಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಆರ್. ಶ್ರೀನಿವಾಸ್, ರಾಜ್ಯ ಆರೋಗ್ಯ ಮತ್ತು ಕು.ಕ. ಹಾಗೂ ವೈ.ಶಿ. ಇಲಾಖೆ ಲಿಪಿಕ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಪುರುಷೋತ್ತಮ, ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಲೇಶಪ್ಪ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಗಂಗಾಧರ, ಶಿವಾಜಿರಾವ್ ಮತ್ತಿತರರಿದ್ದರು.
ಲಿಪಿಕ ನೌಕರರ ಸಂಘದ ಅಧ್ಯಕ್ಷ ಎಸ್. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಹಕ್ಕು ಕಾಯ್ದೆ ವಿಷಯ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿ ಕಾಚಾಪುರ ರಂಗಪ್ಪ ಮಾತನಾಡಿದರು. ಇದೇ ಸಂದರ್ಭ ಪ್ರತಿಭಾನ್ವಿತದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಮಾಚಾರ್ ಪ್ರಾರ್ಥಿಸಿದರು. ವೆಂಕಟೇಶ್ ಸ್ವಾಗತಿಸಿ, ಆನಂದ ಋಗ್ವೇದಿ ನಿರೂಪಿಸಿದರು.







