ಬಂಟ್ವಾಳ ಪುರಸಭೆ : ಸ್ಥಾಯಿ ಸಮಿತಿ ಸಭೆ

ಬಂಟ್ವಾಳ, ಜು.19: ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಅಸಮರ್ಪಕವಾಗಿ ನಡೆಯುತ್ತಿದ್ದು, ಇಂಥ ಹಲವಾರು ಪ್ರಕರಣಗಳಿರುವಾಗ ಕಸ ವಿಂಗಡಣೆ ಪ್ರಕ್ರಿಯೆ ಹೇಗೆ ಯಶಸ್ವಿಯಾಗಲು ಸಾಧ್ಯ ಎಂದು ಬಿ.ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರು ಪ್ರಶ್ನಿಸಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯೆ ಚಂಚಲಾಕ್ಷಿ, ಪಾಣೆಮಂಗಳೂರಿನ ತನ್ನ ವಾರ್ಡಿನಲ್ಲಿ ಕಸ ಗೊಬ್ಬರವಾಗುತ್ತಿದೆ. ನನ್ನ ಮನೆಗೆ ಬಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಕಸ ವಿಲೇವಾರಿ ವ್ಯವಸ್ಥೆ ಯಾಕೆ ಹೀಗಿದೆ ಎಂದು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಪ್ರತಿದಿನ ಕಸ ವಿಲೇವಾರಿಗೆ ಸೂಚನೆ ನೀಡಿದ್ದಾಗಿ ಹೇಳಿದರು. ಕಂಚಿನಡ್ಕಪದವಿನ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಪರಿಹಾರವಾಗದೆ ಕಸ ವಿಲೇವಾರಿ ಕಗ್ಗಂಟಾಗಿಯೇ ಉಳಿಯುತ್ತಿದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಧಿಕಾರಿ ಮತ್ತಡಿ, ಕೆಲವೆಡೆ ಬಕೆಟ್ ವಿತರಣೆ ಬಾಕಿ ಇದ್ದು, ಬಾಕಿ ಇರುವ ವಾರ್ಡುಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ರಸ್ತೆಗೆ ಗುಡ್ಡ ಜರಿದರೂ ಇನ್ನೂ ಅಧಿಕಾರಿಗಳು ಬಾರದಿರುವ ಕುರಿತು ವಾಸು ಪೂಜಾರಿ ಗಮನ ಸೆಳೆದರು. ಬೀದಿದೀಪಗಳು ಹೋದರೂ ಅದನ್ನು ಅನುಷ್ಠಾನಿಸದ ಕುರಿತು ಸದಸ್ಯ ಬಿ.ಮೋಹನ್ ಪ್ರಸ್ತಾಪಿಸಿದರು. ಇದೇ ವೇಳೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಸಂದರ್ಭ ರಸ್ತೆಗಳ ತಿರುವಿನಲ್ಲಿ ಆದ ಹಾನಿ ಇನ್ನೂ ದುರಸ್ತಿಯಾಗಿಲ್ಲ. ನಿಗದಿಪಡಿಸಿದ ಮೊತ್ತವನ್ನು ಆದ್ಯತೆಯ ಮೇರೆಗೆ ವಿನಿಯೋಗಿಸುವಂತೆ ಬಿ.ಮೋಹನ್ ಹೇಳಿದರು.
ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ಜಾಗ ಇನ್ನೂ ಆಗದೇ ಇರುವುದರ ಸಹಿತ ನಾನಾ ವಿಷಯಗಳ ಕುರಿತು ಚರ್ಚೆ ನಡೆಯಿತು. ಪ್ರಭಾ ಆರ್ ಸಾಲ್ಯಾನ್, ಜಗದೀಶ್ ಕುಂದರ್, ಚಂಚಲಾಕ್ಷಿ, ಬಿ.ಮೋಹನ್ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಅಧಿಕಾರಿಗಳಾದ ಡೊಮಿನಿಕ್ ಡಿಮೆಲ್ಲೊ, ಮತ್ತಡಿ ಹಾಗೂ ಮೆಸ್ಕಾಂ ಇಂಜಿನಿಯರ್ ಹರೀಶ್ ಅವರು ಪೂರಕ ಮಾಹಿತಿ ನೀಡಿದರು. ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಉಪಸ್ಥಿತರಿದ್ದರು.







