ಉಚಿತ ಬಸ್‌ಪಾಸ್ ನೀಡಲು ಆಗ್ರಹ: ನಾಳೆ ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟಿಸಲು ನಿರ್ಧಾರ
ಬೆಂಗಳೂರು, ಜು.20: ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಆಗ್ರಹಿಸಿ ಜು.21ರಂದು ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ನಿರ್ಧರಿಸಿವೆ.
ಕಳೆದ ಒಂದು ತಿಂಗಳಿನಿಂದಲೂ ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಸಂಘಟಿಸಿ ಬಸ್‌ಪಾಸ್ ಸಮಸ್ಯೆಯ ಬಗ್ಗೆ ಅಹವಾಲನ್ನು ಸರಕಾರದ ಮುಂದಿಟ್ಟಿವೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಅಲ್ಲದೆ, ಈಗಾಗಲೆ ಬಸ್‌ಪಾಸ್ ಅನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಹಣ ವಾಪಸ್ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ಸರಕಾರವು ವಿದ್ಯಾರ್ಥಿ ಸಂಘಟನೆಗಳು ಸಲ್ಲಿಸಿರುವ ಮನವಿ ಕುರಿತು ಇನ್ನೂ ಯಾವುದೇ ರೀತಿಯಲ್ಲಿ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಜು.21ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಕೈ ಜೋಡಿಸುವಂತೆ ವಿದ್ಯಾರ್ಥಿಗಳಿಗೆ ಎಐಡಿಎಸ್‌ಓ, ಎಐಡಿವೈಒ ಹಾಗೂ ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆಗಳು ಕರೆ ನೀಡಿವೆ.





