ದೇಶದಾದ್ಯಂತ ಲಾರಿ ಮಾಲಕರ ಮುಷ್ಕರ: ಸರಕು ಸಾಗಾಣಿಕೆಯಲ್ಲಿ ಭಾರಿ ವ್ಯತ್ಯಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.20: ದೇಶದಾದ್ಯಂತ ಟೋಲ್ ಮುಕ್ತಗೊಳಿಸುವುದು, ಥರ್ಡ್ಪಾರ್ಟಿ ವಿಮಾ ಪಾಲಿಸಿ ದರ ಕಡಿತಗೊಳಿಸುವುದು, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿರುವುದರಿಂದ ಸರಕು ಸಾಗಾಣಿಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ರಾಜ್ಯ ಸೇರಿದಂತೆ ದೇಶಾದ್ಯಂತ 90 ಲಕ್ಷ ಸರಕು ಸಾಗಾಣಿಕೆಯ ಲಾರಿಗಳು, ಗೂಡ್ಸ್ ವಾಹನಗಳು ರಸ್ತೆಗಿಳಿಯದೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹಾಲು ಮತ್ತು ಮೆಡಿಸಿನ್ ವಾಹನಗಳು ಹೊರತುಪಡಿಸಿ ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಸಾಗಾಟ ಸ್ಥಗಿತಗೊಳಿಸಿ, ಮುಂಜಾನೆ ಮುಷ್ಕರ ಪ್ರಾರಂಭವಾದ್ದರಿಂದ ಹಲವು ಸರಕುಗಳು ಮಾರುಕಟ್ಟೆಗೆ ತಲುಪಿರಲಿಲ್ಲ. ಎರಡನೇ ದಿನವೂ ಮಾಲಕರ ಮುಷ್ಕರ ಮುಂದುವರಿಯಲಿದ್ದು, ಮತ್ತಷ್ಟು ದಿನನಿತ್ಯ ಬಳಕೆ ವಸ್ತುಗಳ ಕೊರತೆ ಎದುರಾಗುವ ಸಾಧ್ಯತೆಗಳಿವೆ.
ದೇಶದಾದ್ಯಂತ 412 ಟೋಲ್ಗಳಿದ್ದು, ವಾರ್ಷಿಕವಾಗಿ 1.2 ಲಕ್ಷ ಕೋಟಿ ಹಣ ಭರಿಸಬೇಕಾಗುತ್ತಿದೆ. ನಾವು ಟೋಲ್ ಕಟ್ಟಲು ಸಿದ್ದರಿದ್ದೇವೆ. ಆದರೆ, ಹಣ ಪಾವತಿಸುವ ವಿಧಾನವನ್ನು ಬದಲಿಸಬೇಕು. ದೇಶದಲ್ಲಿ 1 ಕೋಟಿ ವಾಣಿಜ್ಯ ವಾಹನಗಳು ಟೋಲ್ಗಳ ಮುಖಾಂತರ ಸಂಚಾರ ಮಾಡುತ್ತಿವೆ. ಹೀಗಾಗಿ, ವರ್ಷಕ್ಕೆ 50 ಸಾವಿರದಷ್ಟು ಹಣವನ್ನು ವರ್ಷದ ಮೊದಲೇ ನೀಡಲು ನಾವು ಸಿದ್ಧರಿದ್ದು, ಎಲ್ಲ ಟೋಲ್ಗಳಲ್ಲಿ ನಮಗೆ ಮುಕ್ತ ಅವಕಾಶ ನೀಡಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪಆಗ್ರಹಿಸಿದ್ದಾರೆ.
ದೇಶದಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳ ಡಿಸೇಲ್ ಮೇಲೆ 1 ರೂ. ಸೆಸ್ ವಿಧಿಸಿದರೆ 13 ಸಾವಿರ ಕೋಟಿ, 2 ರೂ. ಸೆಸ್ ವಿಧಿಸಿದರೆ 26 ಸಾವಿರ ಕೋಟಿ ವಾರ್ಷಿಕ ಆದಾಯ ಹೆಚ್ಚಾಗುತ್ತದೆ. ಟೋಲ್ ಮುಕ್ತ ಮಾಡಬಹುದಾಗಿದೆ. ಇದೀಗ ಲಾರಿಗಳು ಟೋಲ್ಗಳಲ್ಲಿ 15 ರಿಂದ 20 ನಿಮಿಷ ನಿಲ್ಲಬೇಕಾಗುತ್ತಿದೆ. ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುವ ಲಾರಿಗಳು 14 ಗಂಟೆಗಳ ಕಾಲ ಟೋಲ್ಗಳಲ್ಲಿ ಸಮಯ ವ್ಯರ್ಥ ಮಾಡುತ್ತಿವೆ. ಇದರಿಂದಾಗಿ, ಡಿಸೇಲ್, ವಾಹನ ರಿಪೇರಿ ಹಾಗೂ ಟೋಲ್ಗಳ ನಿರ್ವಹಣಾ ವೆಚ್ಚಗಳಿಂದ 84 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಡೀಸೆಲ್ ದರವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು. ಟಿಡಿಎಸ್ ರದ್ದುಗೊಳಿಸುವುದು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಬೇಕು. ಇ-ವೇ ಬಿಲ್ ಕುರಿತ ಸಮಸ್ಯೆಯನ್ನು ಪರಿಹರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಆದುದರಿಂದಾಗಿ, ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೂಡಲೇ ಕೇಂದ್ರ ಸರಕಾರ ನಮ್ಮ ಬೇಡಿಕೆಗಳನ್ನುಈಡೇರಿಸಲು ಮುಂದಾಗಬೇಕು. ಇಲ್ಲದಿದ್ದರೆ, ಮುಷ್ಕರ ಮುಂದುವರಿಯುತ್ತದೆ ಎಂದು ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.
ಮುಸುಕಿನ ಗುದ್ದಾಟ: ದೇಶದಾದ್ಯಂತ ಲಾರಿ ಮಾಲಕರು ಮುಷ್ಕರ ನಡೆಸುತ್ತಿದ್ದರೆ, ರಾಜ್ಯದಲ್ಲಿ ಜಿ.ಆರ್.ಷಣ್ಮುಗಪ್ಪ ಬಣ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಚೆನ್ನಾರೆಡ್ಡಿ ಬಣ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಆದುದರಿಂದಾಗಿ, ಎಂದಿನಂತೆ ಹಲವಾರು ಲಾರಿಗಳು ರಾಜ್ಯದಲ್ಲಿ ಸಂಚಾರ ಮಾಡುತ್ತಿದೆ. ಈ ಎರಡೂ ಬಣಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮುಷ್ಕರದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿಲ್ಲ.







