ವಿದೇಶಗಳಲ್ಲಿ ಕನ್ನಡ ಪ್ರಸರಿಸಲು ಸರಕಾರದ ನೆರವು ಅಗತ್ಯ: ಹಿರಿಯ ವಿದ್ವಾಂಸ ವಿವೇಕ ರೈ
ಬೆಂಗಳೂರು, ಜು.20: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಪ್ರಸರಿಸುವುದು ಹಾಗೂ ಕನ್ನಡ ಪುಸ್ತಕಗಳನ್ನು ವಿದೇಶಿ ಭಾಷೆಗಳಿಗೆ ಅನುವಾದಿಸಲು ಅನುಕೂಲವಾಗುವಂತೆ ರಾಜ್ಯಸರಕಾರ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಹಿರಿಯ ವಿದ್ವಾಂಸ ವಿವೇಕ ರೈ ಮನವಿ ಮಾಡಿದರು.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಜರ್ಮನ್ ಲೇಖಕಿ ಕತ್ರೀನ್ ಬೈಂದರ್ ಅನುವಾದಿಸಿರುವ ಪೂರ್ವಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಜರ್ಮನ್ ಅನುವಾದ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಕೋಟ್ಯಂತರ ರೂ.ವ್ಯಯ ಮಾಡುತ್ತಿದ್ದೇವೆ. ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಸಾಹಿತ್ಯ ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿವೆ. ಹಾಗೂ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವು ಒಂದೆಂದು ಹೆಮ್ಮೆಪಟ್ಟುಕೊಳ್ಳುತ್ತೇವೆ. ಆದರೆ, ಯೂರೋಪಿನ ಬಹುತೇಕ ದೇಶಗಳ ಜನತೆಗೆ ಭಾರತದಲ್ಲಿ ಕನ್ನಡ ಭಾಷೆಯೆಂಬುದಿದೆ ಅನ್ನುವುದೇ ಗೊತ್ತಿಲ್ಲ. ಹೀಗಾಗಿ ಕನ್ನಡ ಭಾಷಾ ಸಾಹಿತ್ಯವನ್ನು ಜಗತ್ತಿಗೆ ತೆರೆದಿಡಬೇಕಾದ ಅಗತ್ಯವಿದೆ ಎಂದು ಅವರು ಆಶಿಸಿದರು.
ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಬರೆದಿರುವ ತಿರುಕ್ಕುರಳ್ ಕೃತಿ ಜಗತ್ತಿನ 82 ಭಾಷೆಗಳಿಗೆ ಅನುವಾದವಾಗಿ, ದಾಖಲೆ ಬರೆದಿದೆ. ಆದರೆ, ಕನ್ನಡದ ಪಂಪಾಭಾರತ ಸೇರಿದಂತೆ ಅನೇಕ ಕನ್ನಡ ಪುಸ್ತಕಗಳು ದೇಶದ ಇತರೆ ಭಾಷೆಗಳಿಗೆ ಪರಿಚಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅನುವಾದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವಂತಹ ಅಕಾಡೆಮಿಕ್ ಸಂಸ್ಥೆಯಿಲ್ಲ. ಇದರಿಂದ ವಿದೇಶಿ ಭಾಷೆ ಹಾಗೂ ಕನ್ನಡ ಭಾಷೆ, ಸಂಸ್ಕೃತಿಗಳ ನಡುವಿನ ಕೊಡುಕೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಬೆಳಿದಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಅವರು ಹೇಳಿದರು.
ಬರಹಗಾರ್ತಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಅನುವಾದ ಕ್ಷೇತ್ರವು ಕ್ಲಿಷ್ಟಕರವಾದದ್ದೆಂದು ಪೂರ್ಣಚಂದ್ರ ತೇಜಸ್ವಿಯವರ ಅನಿಸಿಕೆಯಾಗಿತ್ತು. ಪ್ರತಿಯೊಂದು ಭಾಷೆಗೂ ಆದರದೆ ಆದ ಲಯ, ನುಡಿಗಟ್ಟು ಇರುತ್ತದೆ. ಅದರಲ್ಲಿರುವ ಸಾಹಿತ್ಯವನ್ನು ಬೇರೊಂದು ಭಾಷೆಗೆ ಅನುವಾದಿಸುವಾಗ ಕಷ್ಟಸಾಧ್ಯವಾಗಿರುತ್ತದೆ. ಅಂತಹ ಸವಾಲನ್ನು ಸ್ವೀಕರಿಸಿ ಲೇಖಕರಾದ ಡಾ.ಬಿ.ಎ.ವಿವೇಕ ರೈ ಹಾಗೂ ಕತ್ರೀನ್ ಬೈಂದರ್ ಕರ್ವಾಲೋ ಕೃತಿಯನ್ನು ಜರ್ಮನಿಗೆ ಅನುವಾದಿಸಿ ಯಶಸ್ವಿಯಾಗಿದ್ದಾರೆ ಎಂದು ಅಭಿನಂದಿಸಿದರು.
ಅನುವಾದಕಿ ಕತ್ರೀನ್ ಬೈಂದರ್ ಮಾತನಾಡಿ, ಜರ್ಮನ್ ಭಾಷೆ ಹಾಗೂ ಕನ್ನಡಕ್ಕೆ ವ್ಯತ್ಯಾಸ ಇದ್ದರೂ, ಭಾವನೆಗಳು ಒಂದೆ ಆಗಿವೆ. ಹೀಗಾಗಿ ತುಳುನಾಡಿನ ಯಕ್ಷಗಾನ, ಕನ್ನಡ ಭಾಷೆ, ಇಲ್ಲಿನ ಸಾಹಿತ್ಯವನ್ನು ಪ್ರೀತಿಸಿದ್ದೇನೆ. ಹಾಗೂ ಕನ್ನಡ ಸಾಹಿತ್ಯವನ್ನು ಜರ್ಮನ್ ಭಾಷೆಗೆ ಅನುವಾದಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿದ್ದೇನೆಂದು ತಿಳಿಸಿದರು.
ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಬಹುಮಾನಗಳ ಹಿಂದೆ ಬಿದ್ದವರಲ್ಲ. ಮಲೆನಾಡಿನಲ್ಲಿ ಧ್ಯಾನಸ್ಥರಾಗಿ ಚಿಂತಿಸುತ್ತಲೆ ತಮ್ಮ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಬೆಳಗಿಸಿದವರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮ್ಯಾಕ್ಸ್ ಮುಲ್ಲರ್ ಭವನ ನಿರ್ದೇಶಕ ಕ್ಲಾಸ್ ಹೇಮಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೂರ್ಣಚಂದ್ರ ತೇಜಸ್ವಿ ಬರೆದಿರುವ ಕೃತಿಗಳನ್ನು ಓದಿ ದೇಶ, ವಿದೇಶಗಳಿಂದ ಹಲವು ಮಂದಿ ಸಾಹಿತ್ಯಾಸಕ್ತರು ಮೂಡಿಗೆರೆಯಲ್ಲಿರುವ ತೇಜಸ್ವಿ ಮನೆಯನ್ನು ಹುಡುಕಿಕೊಂಡು ಈಗಲೂ ಬರುತ್ತಾರೆ. ತೇಜಸ್ವಿ ಓಡಾಡಿದ್ದ ಜಾಗಗಳಲ್ಲಿ ತಾವು ಸುತ್ತಾಡಿ ಸಂತೋಷ ಪಡುತ್ತಾರೆ. ನಮ್ಮ ಮನೆಯ ಊಟವನ್ನು ಸವಿದು, ಉಡುಗೊರೆಯನ್ನು ಕೊಟ್ಟು ಹೋಗುತ್ತಾರೆ. ಹೀಗಾಗಿ ಸಾಹಿತ್ಯಕ್ಕೆ ಗಡಿ, ಭಾಷೆಯೆಂಬ ಯಾವುದೆ ಚೌಕಟ್ಟಿಲ್ಲ.
-ರಾಜೇಶ್ವರಿ ತೇಜಸ್ವಿ ಬರಹಗಾರ್ತಿ







