ಮಲೆನಾಡಿನ ಅಲ್ಲಲ್ಲಿ ಮುಂದುವರೆದ ಮಳೆ: ವಿದ್ಯುತ್ ಸಮಸ್ಯೆಯಿಂದ ಕತ್ತಲೆಯಲ್ಲಿ ಮುಳುಗಿದ ಗ್ರಾಮಗಳು

ಚಿಕ್ಕಮಗಳೂರು, ಜು.20: ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದ್ದ ಮಲೆನಾಡಿನ ಮಂದಿ ಮತ್ತೆ ಮಳೆ ಕಾಟಕ್ಕೆ ಶಪಿಸಿಕೊಳ್ಳುವಂತಾಗಿದೆ.
ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಹಗಲಿನ ವೇಳೆ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು. ಆದರೆ ರಾತ್ರಿಯಾಗುತ್ತಿದ್ದಂತೆ ಕಳಸ, ಕುದುರೆಮುಖ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ, ಬಾಳೆಹೊನ್ನೂರು ಹಾಗೂ ಶೃಂಗೇರಿ, ಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಧಾರಾಕಾರ ಮಳೆ, ಗಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ನೂರಾರು ಗ್ರಾಮಗಳು ಕತ್ತಲೆಯಲ್ಲೇ ಮುಳುಗುವಂತಾಗಿತ್ತು. ಶುಕ್ರವಾರ ಬೆಳಗಿನ ಹೊತ್ತು ಮಲೆನಾಡಿನಲ್ಲಿ ಅಲ್ಲಲ್ಲಿ ಧಾರಾಕಾರ ಮಳೆಯಾಗಿದ್ದು, ಮಳೆ ಮಧ್ಯಾಹ್ನದ ಹೊತ್ತು ಬಿಡುವು ನೀಡಿತ್ತಾದಾರೂ ಮೋಡ ಕವಿದ ವಾತಾವರಣದಿಂದಾಗಿ ಬಿಸಿಲಿನ ಸುಳಿವಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಮಲೆನಾಡು ಭಾಗದ ಅಲ್ಲಲ್ಲಿ ಸಾಧಾರಣ ಮಳೆಯೊಂದಿಗೆ ಗಾಳಿಯೂ ಬೀಸಿದ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದ ಇತ್ತೀಚೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನದಿಗಳು ಸದ್ಯ ಶಾಂತಗೊಂಡಿದ್ದರೂ ತುಂಬಿ ಹರಿಯುತ್ತಿವೆ.
ಇನ್ನು ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆ ಸುರಿದಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಭಾರೀ ಮಳೆಯಾಗದಿದ್ದರೂ ಆಗಾಗ್ಗೆ ಗಾಳಿ ಬೀಸಿದ್ದರಿಂದ ಕೆಲವೆಡೆ ಮರಗಳು ಧರೆಗುಳಿದ ಘಟನೆಗಳು ಸಂಭವಿಸಿವೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ನಿಂತಿದ್ದರೂ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮಳೆ ಆರ್ಭಟ ನಿಂತ ಬೆನ್ನಲ್ಲೆ ನೆನೆಗುದಿಗೆ ಬಿದ್ದಿದ್ದ ಭತ್ತ ಕೃಷಿ, ಅಡಿಕೆ, ಕಾಫಿ ತೋಟಗಳ ಕೃಷಿ ಚಟುವಟಿಕೆಗಳು ಜಿಲ್ಲಾದ್ಯಂತ ಭರದಿಂದ ಸಾಗಿವೆ. ಇನ್ನು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡಿನ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಹರಸಾಹಸಪಡುವಂತಾಗಿದೆ.
ಇನ್ನು ಮಲೆನಾಡು ಭಾಗದಲ್ಲಿ ಭಾರೀ ಮಳೆಗೆ ನೆಲಕ್ಕುರುಳಿದ ಮರಗಳಿಂದಾಗಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಮಲೆನಾಡಿನ ನೂರಾರು ಗ್ರಾಮಗಳಲ್ಲಿ ಪ್ರತಿದಿನ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.







