ವಿದ್ಯಾರ್ಥಿನಿ ಆತ್ಮಹತ್ಯೆಗೆ ಇಲಾಖೆ ನಿರ್ಲಕ್ಷವೇ ಕಾರಣ: ಸಿಎಫ್‌ಐ ಆರೋಪ
ಬೆಂಗಳೂರು, ಜು. 20: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಕೋಡಿಮಾರನಹಳ್ಳಿಯ ಚೈತನ್ಯಾ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಗೂಢ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆ ಶೀಘ್ರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯೆ ಮುಮ್ತಾಝ್ ಆಗ್ರಹಿಸಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಇತ್ತೀಚೆಗೆ ಶಿಕ್ಷಕನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಝೈಬುನ್ನಿಸಾ ಪ್ರಕರಣವು ಹಳ್ಳ ಹಿಡಿದಿದ್ದು ಕುಟುಂಬವು ನ್ಯಾಯದ ನಿರೀಕ್ಷೆಯಲ್ಲಿದೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಈ ಹಿಂದೆ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಘಟನೆಗಳು ನಡೆದಿದ್ದು ಇಲಾಖೆಗಳು ಕಠಿಣ ಕಾನೂನು ಕ್ರಮ ಜರುಗಿಸದಿರುವುದೇ ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸಲು ಕಾರಣ. ಈ ಮೂಲಕ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸುರಕ್ಷಿತವಲ್ಲ ಎಂಬುದು ಖಾತರಿಯಾಗುತ್ತಿದೆ.
ಕೋಡಿಮಾರನಹಳ್ಳಿಯ ಪ್ರಕರಣದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಕೆಲ ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಮಾನಸಿಕವಾಗಿ ನೊಂದಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು ಗೃಹ, ಮಕ್ಕಳ ಕಲ್ಯಾಣ ಮತ್ತು ಶಿಕ್ಷಣ ಇಲಾಖೆಗಳು ಶೀಘ್ರ ಮಧ್ಯಸ್ಥಿಕೆ ವಹಿಸಿ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಿಎಫ್‌ಐ ಪ್ರಕಟಣೆಯಲ್ಲಿ ಆಗ್ರಹಿಸಿದೆ.





