ಶಿರೂರು ಮೂಲಮಠಕ್ಕೆ ಸಚಿವ ಖಾದರ್ ಭೇಟಿ

ಉಡುಪಿ, ಜು.20: ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ನಿನ್ನೆ ನಿಧನರಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ಶಿರೂರಿನಲ್ಲಿರುವ ಮೂಲಮಠಕ್ಕೆ ಭೇಟಿ ನೀಡಿ ಅವರನ್ನು ಸಮಾಧಿ ಮಾಡಿದ ಜಾಗವನ್ನು ಸಂದರ್ಶಿಸಿ ಅವರಿಗೆ ನಮನ ಸಲ್ಲಿಸಿದರು.
ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ನಾಯಕರಾದ ನರಸಿಂಹ ಮೂರ್ತಿ, ಅಶೋಕ್ ಕೊಡವೂರು, ದಿನೇಶ್ ಪುತ್ರನ್‌ರೊಂದಿಗೆ ಶಿರೂರಿಗೆ ಆಗಮಿಸಿದ ಸಚಿವರು, ನೇರವಾಗಿ ಸಮಾಧಿ ಇದ್ದ ಪ್ರದೇಶಕ್ಕೆ ತೆರಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿರುವ ಶಿರೂರುಶ್ರೀಗಳು ನಮ್ಮನ್ನಗಲಿದ್ದಾರೆ. ನಾನು ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಭೆಯಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಇಂದು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.
ಶಿರೂರುಶ್ರೀಗಳ ಸಾವಿಗೆ ವಿಷಪ್ರಾಶನ ಕಾರಣವೆಂಬ ವೈದ್ಯರ ಹೇಳಿಕೆಯ ಕುರಿತು ಸರಕಾರ ತನಿಖೆ ನಡೆಸುವುದೇ ಎಂದು ಕೇಳಿದಾಗ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಇಲಾಖೆ ವಿಚಾರ ಮಾಡಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದರು.
ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅಗತ್ಯ ಬಿದ್ದರೆ ಉನ್ನತ ತನಿಖೆಗೆ ಸಿದ್ಧ ಎಂದು ಹೇಳಿರುವುದರತ್ತ ಅವರ ಗಮನ ಸೆಳೆದಾಗ, ಸದ್ಯಕ್ಕೆ ಅಂಥ ಯಾವುದೇ ವಿಚಾರಗಳಿಲ್ಲ. ಜಿಲ್ಲಾಡಳಿತ ಅಥವಾ ಇಲಾಖೆಯಿಂದ ಪ್ರಸ್ತಾಪ ಬಂದಾಗ ನೋಡಬಹುದು. ಈಗ ಜಿಲ್ಲಾಡಳಿತ ಹಾಗೂ ಇಲಾಖೆಯೇ ತನಿಖೆ ನಡೆಸುತ್ತಿದೆ ಎಂದರು.
ನಾನು ಯಾವುದೇ ಅಧಿಕಾರದ ಸ್ಥಾನದಿಂದ ಇಲ್ಲಿಗೆ ಬಂದಿಲ್ಲ. ಶಿರೂರುಶ್ರೀಗಳೊಂದಿಗೆ ಇರುವ ಆತ್ಮೀಯತೆಯ ಕಾರಣದಿಂದ ಇಲ್ಲಿಗೆ ಬಂದಿದ್ದೇನೆ ಎಂದರು.







