ಶುಕ್ರವಾರದ ನಮಾಝ್ ಗೆ ಹಜ್ ಕರ್ಮದಷ್ಟೇ ಫಲ: ಖಾಝಿ ಖಾಸಿಂ ಮುಸ್ಲಿಯಾರ್
ಕಿತ್ಲೆಗಂಡಿ-ಕುಕ್ಕಳ್ಳಿ ಮಸೀದಿಯಲ್ಲಿ ಜುಮಾ ಉದ್ಘಾಟನೆ

ಮೂಡಿಗೆರೆ,ಜು.20: ಶುಕ್ರವಾರ ಮಸೀದಿಗೆ ತೆರಳಿ ಜುಮಾ ನಮಾಜ್‍ನಲ್ಲಿ ಪಾಲ್ಗೊಂಡವರಿಗೆ ಪವಿತ್ರ ಮಕ್ಕಾದಲ್ಲಿ ಹಜ್ ನಿರ್ವಹಿಸಿದ ಪುಣ್ಯ ಲಭಿಸಲಿದೆ ಎಂದು ಮೂಡಿಗೆರೆ ಖಾಝಿ ಎಂ.ಎಂ.ಖಾಸಿಂ ಮುಸ್ಲಿಯಾರ್ ತಿಳಿಸಿದರು.
ಅವರು ಶುಕ್ರವಾರ ಕಿತ್ಲೆಗಂಡಿ-ಕುಕ್ಕಳ್ಳಿಯ ಮುಹಿಯದ್ದೀನ್ ಮಸೀದಿಯಲ್ಲಿ ನೂತನವಾಗಿ ಆರಂಭಿಸಿದ ಶುಕ್ರವಾರದ ಜುಮಾ ನಮಾಝ್‍ನ ವಿಧಿ-ವಿಧಾನ ನೆರವೇರಿಸುವ ಮೂಲಕ ಉದ್ಘಾಟಿಸಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಮಕ್ಕಾಗೆ ತೆರಳಿ ಹಜ್ ಕರ್ಮ ಪೂರೈಸಿದ ಮಾತ್ರಕ್ಕೆ ಹಜ್ ಕರ್ಮ ಸಿಂಧುವಾಗಲಾರದು. ತಾನು ಕೂಡಿಟ್ಟ ಸಂಪತ್ತನ್ನು ಬಡವರಿಗೆ ದಾನ ನೀಡುವ ಮೂಲಕ ತನ್ನ ಜೀವನವನ್ನು ಧಾರ್ಮಿಕತೆಯ ಕಡೆಗೆ ಗಮನ ಹರಿಸಿದರೆ ಹಜ್ ಮತ್ತು ಉಮ್ರಾ ಮತ್ತು ನಿರ್ವಹಿಸಿದ ನಮಾಝ್‍ಗಳು ಸಿಂಧುವಾಗಲಿದೆ ಎಂದು ಹೇಳಿದರು.
ಶ್ರೀಮಂತರಿಗೆ ಹಜ್ ಕರ್ಮ ನಿರ್ವಹಿಸುವುದು ಕಡ್ಡಾಯ. ಬಡತನ ರೇಖೆಯಲ್ಲಿರುವವರು ಮತ್ತು ದುರ್ಬಲರಿಗೆ ವಿನಾಯಿತಿ ಇದೆ. ದಿನದ ಐದು ಹೊತ್ತಿನ ನಮಾಝ್ ಮತ್ತು ಶುಕ್ರವಾರದ ಜುಮಾ ನಮಾಝ್ ಎಲ್ಲರಿಗೂ ಕಡ್ಡಾಯವಾಗಿದೆ ಎಂದ ಅವರು, ಮನುಷ್ಯ ಬದುಕಿನಲ್ಲಿ ಏಳುಬೀಳುಗಳ ನಡುವೆ ತನ್ನ ಕುಟುಂಬವನ್ನು ಸಂಸ್ಕಾರಯುತವಾಗಿ ಬದುಕಿರುವವರೆಗೂ ಕೊಂಡೊಯ್ಯುವ ಪ್ರಬಲ ಸವಾಲು ಪ್ರತಿಯೊಬ್ಬರಿಗೂ ಇದೆ. ಅಂತಹ ಜೀವನದ ದಾರಿ ಸುಲಭವಾಗಲು ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಪಂಗಡ ಎಂಬ ಬೇಧ-ಭಾವವನ್ನು ಬದಿಗೊತ್ತಿ ಎಲ್ಲಾ ವರ್ಗದವರನ್ನೂ ಒಂದುಗೂಡಿಸಿ ಧಾರ್ಮಿಕ ಮತ್ತು ಲೌಕಿಕ ಬದುಕಿನಲ್ಲಿ ಮುಂದುವರಿಯುವುದೇ ನಿಜವಾದ ಬದುಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಖಾಝಿ ಎಂ.ಎಂ.ಖಾಸಿಂ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಬಿ.ಇ.ಪೊಡಿಯಬ್ಬ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಮಸೀದಿಯ ಮುದರ್ರಿಸ್ ಉಸ್ಮಾನ್ ದಾರಿಮಿ ಆರಂಭಿಕ ದಿನದ ಜುಮಾ ನಮಾಝ್‍ನ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಮಿಸ್ಹಾಬ್ ಸಹದಿ ನೆಲ್ಯಾಡಿ, ಕೆ.ಎಸ್.ಇಬ್ರಾಹಿಂ, ಕೆ.ಎಚ್.ಅಬ್ದುಲ್ ಕರೀಂ, ಅಕ್ಬರ್ ಅಲಿ, ಕೆ.ಯು.ಹಕೀಂ, ಅಬ್ದುಲ್ ರಹಿಮಾನ್, ಕೆ.ಎಂ.ಫಾರೂಕ್, ಮಹಮ್ಮದ್ ಅಲಿ ಹನೀಫಿ, ಮೂಡಿಗೆರೆ ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಹ್ಯಾಂಡ್‍ಪೋಸ್ಟ್ ಮಸೀದಿ ಅಧ್ಯಕ್ಷ ಹಮೀದ್, ರಾಜ್ಯ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಉದ್ಯಮಿ ಅಕ್ರಂ ಹಾಜಿ, ಬಿ.ಎಚ್.ಮಹಮ್ಮದ್, ಫಿಶ್‍ಮೋಣ್, ಅಲ್ತಾಫ್ ಬಿಳಗುಳ, ಶರೀಫ್, ಯಾದ್‍ಗಾರ್ ಇಬ್ರಾಹಿಂ, ಕರೀಂ ಫೂಟ್‍ವೇರ್, ಅಬ್ದುಲ್ ರಝಾಕ್ ಹಂಡುಗುಳಿ ಮತ್ತಿತರರು ಉಪಸ್ಥಿತರಿದ್ದರು.







