ನೀರಿನಲ್ಲಿ ಯುವಕ ಕೊಚ್ಚಿ ಹೋದ ಪ್ರಕರಣ: ಕುಟುಂಬಸ್ಥರಿಗೆ 5 ಲಕ್ಷ ರೂ. ಚೆಕ್ ವಿತರಣೆ
ಜಯಪುರ, ಜು.20: ಇಲ್ಲಿಗೆ ಸಮೀಪದ ಕೊಗ್ರೆ ಹುಲ್ಲಿನಗದ್ದೆ ಸೇತುವೆ ನೀರಿನಲ್ಲಿ ಇತ್ತೀಚೆಗೆ ಕೊಚ್ಚಿ ಹೋಗಿ ಮೃತಪಟ್ಟಿದ್ದ ಯುವಕ ಅಶೋಕನ ಕುಟುಂಬದವರಿಗೆ ಶಾಸಕ ಟಿ.ಡಿ.ರಾಜೇಗೌಡ 5 ಲಕ್ಷ ರೂ. ಪರಿಹಾರದ ಚೆಕ್‌ಅನ್ನು ಶುಕ್ರವಾರ ಹಸ್ತಾಂತರಿಸಿದರು.
ಯುವಕ ಅಶೋಕ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ 9 ದಿನಗಳು ಕಳೆದ ಬಳಿಕ ಗುರುವಾರ ಮಧ್ಯಾಹ್ನ ಕೊಪ್ಪ ತಾಲೂಕಿನ ತೀರ್ಥಕೆರೆ ದೇವಗೊಂಡನ ಹಳ್ಳದಲ್ಲಿ ಪತ್ತೆಯಾಗಿದ್ದು, ಮೃತನ ಕುಟುಂಬಸ್ಥರಿಗೆ ಶುಕ್ರವಾರ ಸರಕಾರ ಪ್ರಕೃತಿ ವಿಪತ್ತು ನಿಧಿಯಿಂದ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಸೇರಿದಂತೆ ಒಟ್ಟು 5 ಲಕ್ಷ ರೂ. ಚೆಕ್‌ಅನ್ನು ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಕೊಪ್ಪ ತಹಶೀಲ್ದಾರ್ ತನುಜಾ, ಅಧಿಕಾರಿ ವರ್ಗದವರು, ಚುನಾಯಿತ ಪ್ರತಿನಿಧಿಗಳು ಮೃತರ ಮನೆಗೆ ಹೋಗಿ ಮೃತರ ತಾಯಿ ಶಾಂತರವರಿಗೆ ನೀಡಿದರು.
ಚೆಕ್ ಹಸ್ತಾಂತರಿಸಿ ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ, ಅನಾಹುತ ನಡೆದ ಸಂದರ್ಭದಲ್ಲಿ ನಾನು ವಿಧಾನಸಭೆಯ ಕಲಾಪದಲ್ಲಿ ಅನೇಕ ಕಾಮಗಾರಿಗಳ ಚರ್ಚೆಯಲ್ಲಿದ್ದೆ. ಆದ್ದರಿಂದ ಆ ತಕ್ಷಣದಲ್ಲಿ ಅನಾಹುತ ನಡೆದ ಸ್ಥಳಕ್ಕೆ ಭೇಟಿಯಾಗಲು ಅಸಾಧ್ಯವಾಯಿತು. ಕಲಾಪದ ನಂತರ ನಾನು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲು ಕೊಪ್ಪ ತಹಶೀಲ್ದಾರ್‌ರವರಿಗೆ ತಿಳಿಸಿದ್ದೆ. ಅವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೆ. ಶೋಧ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೆ. ಆದರೆ, ಕೆಲವರು ಶಾಸಕರು ಇಂತಹ ಘಟನೆ ನಡೆದರೂ ಸ್ಥಳಕ್ಕೆ ಹಾಗೂ ಕುಟುಂಬಸ್ಥರನ್ನು ಭೇಟಿಯಾಗಿಲ್ಲ ಎಂದು ಅಂತರ್ಜಾಲದ ಮೂಲಕ ದೂರಿದ್ದು ವಿಷಾಧನೀಯ. ಇನ್ನು ಮುಂದಾದರೂ ಸಾವಿನ ಮನೆಯಲ್ಲಿ ರಾಜಕೀಯ ನಡೆಸುವುದನ್ನು ಬಿಟ್ಟು ಸಂತ್ರಸ್ಥರಿಗೆ ನೆರವಾಗಲು ಸಹಕರಿಸಿ ಎಂದರು.
ಚೆಕ್ ವಿತರಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಕೊಪ್ಪ ತಾ.ಪಂ ಅಧ್ಯಕ್ಷೆ ಜಯಂತಿ ನಾಗರಾಜ್, ಸದಸ್ಯೆ ಭವಾನಿ ಹೆಬ್ಬಾರ್, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಂ ಸತೀಶ್, ಅಗಳಗಂಡಿ ಗ್ರಾ.ಪಂ ಸದಸ್ಯ ಆತ್ಮರಾಮ್, ಅತ್ತಿಕುಡಿಗೆ ಗ್ರಾ.ಪಂ ಸದಸ್ಯ ಗೋಪಾಲಕೃಷ್ಣ, ಉಪತಹಶೀಲ್ದಾರ್ ರಾಮಣ್ಣ ನಾಡಿಗ್, ಅಧಿಕಾರಿಗಳಾದ ನಾಗರಾಜ್, ಪಂಪನಾ, ಸುಧೀರ್, ಆರಕ್ಷಕ ಅಧಿಕಾರಿಗಳಾದ ಗಿರೀಶ್, ರವಿ ಉಪಸ್ಥಿತರಿದ್ದರು.