ಕಳಸ: ಮನೆಯ ಗೋಡೆಗೆ ಢಿಕ್ಕಿಯಾದ ಕಾರು; ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಪ್ರವಾಸಿಗರು
ಕಳಸ, ಜು.20: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಮನೆಯೊಂದರ ಗೋಡೆಗೆ ಢಿಕ್ಕಿ ಹೊಡೆದ ಘಟನೆ ಮೂಡಿಗೆರೆ ತಾಲೂಕು ಕಳಸ ಪಟ್ಟಣ ಸಮೀಪದ ಹಳುವಳ್ಳಿ ಎಂಬದಲ್ಲಿ ಶುಕ್ರವಾರ ನಡೆದಿದೆ.
ಹೊರನಾಡು ದೇವಾಲಯಕ್ಕೆ ಪ್ರವಾಸಿಗರ ಮಾರುತಿ ಓಮ್ನಿ ಕಾರು ಹಳುವಳ್ಳಿ ರಸ್ತೆಯ ಮೂಲಕ ಕಳಸ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಹಳುವಳ್ಳಿ ಸೇತುವೆ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಕಾರು ಉರುಳಿ ಅಲ್ಲೇ ಇದ್ದ ಮನೆಯೊಂದರ ಗೋಡೆಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಹಾಗೂ ಮನೆಯ ಹಿಂಬಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳೀಯರು ಗಾಯಾಳುಗಳನ್ನು ಕಳಸ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಹೊಂಡದಲ್ಲಿದ್ದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story