ಮಡಿಕೇರಿ: ಅಕ್ರಮ ಮರ ಸಾಗಣೆ; ಓರ್ವನ ಬಂಧನ

ಮಡಿಕೇರಿ, ಜು.20: ಅರಣ್ಯದಲ್ಲಿ ಮರ ಕಡಿದು ಸಾಗಣೆ ಮಾಡುತ್ತಿದ್ದ ಆರೋಪದಡಿ ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿದ್ದು, 2 ಲಕ್ಷ ರೂ. ವೌಲ್ಯದ ಮಾಲು ವಶ ಪಡಿಸಿಕೊಂಡಿದ್ದಾರೆ.
ಚೆನ್ನಂಗೊಲ್ಲಿಯ ಮುಕ್ತಾರ್ (37) ಬಂಧಿತ ಆರೋಪಿ. ಖಚಿತ ಮಾಹಿತಿ ಆಧಾರದಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದಾಳಿ ನಡೆಸಿರುವ ತಂಡ, ತಾರಿಕಟ್ಟೆ ಅರಣ್ಯದಿಂದ ಮರ ಕಡಿದು ಸಾಗಾಟ ಮಾಡುತ್ತಿದ್ದ ಸಂದರ್ಭ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದೆ.
ಮಾರುತಿ ಓಮ್ನಿ ವ್ಯಾನ್‌ಗೆ ಬೀಟೆ ಹಾಗೂ ತೇಗದ ಮರದ ತುಂಡುಗಳನ್ನು ತುಂಬಿ ಸಾಗಣೆಗೆ ಮುಂದಾಗಿದ್ದರು. ದಾಳಿ ಸಂದರ್ಭ ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದು, ಚಾಲಕ ಮುಕ್ತಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮರದ 8 ತುಂಡುಗಳು ಹಾಗೂ ವಾಹನ ಸೇರಿದಂತೆ 2 ಲಕ್ಷ ರೂ. ವೌಲ್ಯದ ಮಾಲು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಯನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಿತಿಮತಿ ವಲಯದ ಪ್ರಬಾರ ವಲಯಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ವನಪಾಲಕ ಗಣಪತಿ, ಸಿಬ್ಬಂದಿಗಳಾದ ದೇವರಾಜು, ಪೊನ್ನಣ್ಣ, ಸಿದ್ದ, ಸಂಜು ಸಂತೋಷ್, ದಾದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





