ಕೊಳ್ಳೇಗಾಲ: 39 ನೇ ರೈತ ಹುತಾತ್ಮ ದಿನಾಚರಣೆ; ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ
ಕೊಳ್ಳೇಗಾಲ,ಜು.21: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ 39ನೇ ರೈತ ಹುತಾತ್ಮ ದಿನಾಚರಣೆ ಆಚರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಆರ್.ಎಂ.ಸಿಯಲ್ಲಿ ಶನಿವಾರ ರೈತರು ಸಮಾವೇಶಗೊಂಡು ನಂತರ ಕುರುಬನಕಟ್ಟೆ ರಸ್ತೆ, ಐಬಿ ರಸ್ತೆ, ಎಂ.ಜಿ.ಎಸ್.ವಿ ಕಾಲೇಜು ರಸ್ತೆ, ಗುರುಕಾರ್ ವೃತ್ತ, ಬಸ್‍ನಿಲ್ದಾಣ ರಸ್ತೆ, ಡಾ.ವಿಷ್ಣು ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತದ ಮೂಲಕ ತೆರಳಿ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರವನ್ನು ರಾಜ್ಯ ಮುಖ್ಯಮಂತ್ರಿಯವರಿಗೆ ತಲುಪಿಸಿ ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಆಗ್ರಹಿಸಿದರು.
ಸಂಪೂರ್ಣ ರೈತರ ಸಾಲ ಮನ್ನಾ ಮಾಡವುದು, ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಕಬಿನಿ ನಾಲೆಗಳಿಗೆ ಹಾಗೂ ಕೆರೆಗಳ ಹೂಳು ತೆಗೆಯಿಸಿ ನೀರು ತುಂಬಿಸಬೇಕು. ಚೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಉಂಟಾಗುತ್ತೀರುವ ಕಿರುಕುಳ ತಪ್ಪಿಸಬೇಕು, ಸಕ್ಕರೆ ಇಳವರಿ ಮೇಲೆ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬೆಲೆ ನಿಗದಿ ಪಡಿಸಬೇಕು, ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ನಷ್ಠಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ರೈತರ ಸಂಕಷ್ಟವನ್ನು ಪರಿಹರಿಸಬೇಕೆಂದು ಮುಖ್ಯಮಂತ್ರಿಗಳನ್ನು ಹನೂರು ಹಾಗೂ ಕೊಳ್ಳೇಗಾಲ ರೈತ ಸಂಘಟನೆಗಳು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಿವರಾಮು, ತಾಲೂಕು ಅಧ್ಯಕ್ಷ ಗೌಡೇಗೌಡ, ಶೈಲೇಂದ್ರ, ರವಿನಾಯ್ಡು, ಬಸವರಾಜು, ಸತೀಶ್ ಧನಗೆರೆ, ವಿರೂಪಾಕ್ಷ, ಜಗದೀಶ್, ನಾಗರಾಜಪ್ಪ, ಚಂದ್ರು ಸೇರಿದಂತೆ ರೈತ ಮುಖಂಡರುಗಳು ಭಾಗಿಯಾಗಿದ್ದರು.