ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ, ಬೀದರ್ ಗುಂಪುಹತ್ಯೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು, ಜು.21: ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ಜಾರ್ಖಂಡ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಮತ್ತು ಎಬಿವಿಪಿ ನಡೆಸಿದ ಮಾರಣಾಂತಿಕ ದಾಳಿ ಹಾಗೂ ಬೀದರ್‌ನಲ್ಲಿ ನಡೆದ ಗುಂಪುಹತ್ಯೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐನ ಮಂಗಳೂರು ದಕ್ಷಿಣ ಕ್ಷೇತ್ರದ ಸುಹೈಲ್ ಖಾನ್, ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಆದಿವಾಸಿಗಳ ಸಭೆಯೊಂದರಲ್ಲಿ ಭಾಗವಹಿಸಿದ ಸ್ವಾಮಿ ಅಗ್ನಿವೇಶ್ ಅವರ ಮೇಲಿನ ದಾಳಿಯು ಸಂಘಪರಿವಾರದ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ಖಂಡಿಸಿದರು.
ಹಿಂದುತ್ವ, ಫ್ಯಾಶಿಸಂ ದೇಶದಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ. ಹಿಂದುತ್ವದ ವಿರುದ್ಧವಾಗಿ ಸೈದ್ಧಾಂತಿಕ ಹೋರಾಟ ಮಾಡುವ ವಿಚಾರವಾದಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಅವರ ದೈಹಿಕ ಹಲ್ಲೆಯನ್ನು ನಡೆಸುತ್ತಿದ್ದಾರೆ. ಗೋವಿಂದ ಪನ್ಸಾರೆ, ದಾಬೋಲ್ಕರ್, ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಮೊದಲಾದ ವಿಚಾರವಾದಿಗಳನ್ನು ಗುಂಡಿಕ್ಕಿ ಕೊಂದದ್ದು ಇದೇ ಹಿಂದುತ್ವ ಗೂಂಡಾಗಳು ಎಂದು ದೂರಿದರು.
ಇಷ್ಟೆಲ್ಲ ಅರಾಜಕತೆ ದೇಶದಾದ್ಯಂತ ನಡೆಯುತ್ತಿರುವಾಗಲೂ ದೇಶದ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಹಿಂದುತ್ವದ ಗೂಂಡಾಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅನುಮತಿಸಿದಂತಾಗಿದೆ. ಜಾರ್ಖಂಡ್ ಸರಕಾರದ ಸಚಿವರು, ಶಾಸಕರು ಕೂಡ ಹಲ್ಲೆ ನಡೆಸಿದ ಆರೋಪಿಗಳ ಪರವಾಗಿ ವಕಾಲತ್ತು ವಹಿಸುತ್ತಿರುವುದನ್ನು ನೋಡಿದಾಗ ದೇಶವೇ ಅರಾಜಕತೆಯಲ್ಲಿರುವುದು ಎದ್ದು ಕಾಣುತ್ತಿದೆ ಎಂದರು.
ದೇಶದಲ್ಲಿ ಶಾಂತಿ, ನೆಮ್ಮದಿ ಮತ್ತು ಎಲ್ಲರಿಗೂ ಬದುಕುವ ಅವಕಾಶ ಹಾಗೂ ಹಕ್ಕು ಸಿಗಬೇಕಾದಲ್ಲಿ ಹಿಂದುತ್ವ ಫ್ಯಾಶಿಸಂನ್ನು ದೇಶದಿಂದ ನಿರ್ಮೂಲನೆ ಮಾಡುವುದು ಅಗತ್ಯವಿದೆ. ಎಲ್ಲ ಪ್ರಜ್ಞಾವಂತ ನಾಗರಿಕರು ಜಾತ್ಯತೀತ ಉಳಿವಿಗಾಗಿ ಒಂದಾಗಬೇಕು ಎಂದು ಹೇಳಿದರು.
ಉತ್ತರ ಭಾರತದ ಕಡೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗುಂಪುಹಿಂಸಾ ಹತ್ಯೆಯು ರಾಜ್ಯಕ್ಕೂ ಕಾಲಿಟ್ಟಿದೆ. ಬೀದರ್ ಜಿಲ್ಲೆಯಲ್ಲಿ ಗುಂಪೊಂದು ಮಕ್ಕಳ ಕಳ್ಳ ಸಾಗಣೆ ನಡೆಸುವವರು ಎಂದು ಸುಳ್ಳುಸುದ್ದಿ ಹಬ್ಬಿಸಿ ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಮುಹಮ್ಮದ್ ಅಝಂ ಎಂಬ ಯುವಕನನ್ನು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿರುವುದನ್ನು ಅವರು ಖಂಡಿಸಿದರು.
ಈ ರೀತಿಯ ದೌರ್ಜನ್ಯ ನಡೆಸಿ ಗುಂಪುಹಲ್ಲೆ, ಗುಂಪುಹತ್ಯೆ ನಡೆಸುವವರ ಮೇಲೆ ಸರಕಾರವು ಹೊಸ ಕಠಿಣ ಕಾನೂನು ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐನ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಕಾರ್ಪೊರೇಟರ್ ಅಯಾಝ್ ಮತ್ತಿತರರು ಪಾಲ್ಗೊಂಡಿದ್ದರು.







