ಗದ್ದೆಯಲ್ಲಿ ನೇಜಿ ನಾಟಿ ಮಾಡಿ, ಕೆಸರಿನಲ್ಲಿ ಮಿಂದು ಸಂಭ್ರಮಿಸಿದ ಪೆರ್ನೆ ಶಾಲಾ ವಿದ್ಯಾರ್ಥಿಗಳು

ಬಂಟ್ವಾಳ, ಜು. 21: ಪ್ರತಿದಿನ ಶಾಲೆಯ ನಾಲ್ಕು ಕೋಣೆಯ ಮಧ್ಯೆ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಇಂದು ಗದ್ದೆಗೆ ಇಳಿದು ಕೃಷಿ ಕಾರ್ಯ ಮಾಡಿದರು. ಗದ್ದೆಯಲ್ಲಿ ನೇಜಿ ನಾಟಿ ಮಾಡಿ, ಕೆಸರಿನಲ್ಲಿ ಮಿಂದು ಸಂಭ್ರಮಿಸಿದರು.
ಪೆರ್ನೆಯ ಶ್ರೀರಾಮಚಂದ್ರ ಪ್ರೌಢಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್‍ನ ವಿದ್ಯಾರ್ಥಿಗಳು ಪೆರ್ನೆ ಕೇದಗೆಗುತ್ತುವಿನ ರಾಜೀವಶೆಟ್ಟಿ ಮತ್ತು ಮಂಜುಳ ದಂಪತಿಗೆ ಸೇರಿದ ಗದ್ದೆಯಲ್ಲಿ 'ಕೆಸರ್ಡ್ ಒಂಜಿ ದಿನ' ಕಾರ್ಯಕ್ರಮ ಆಯೋಜಿಸಿ ಕೃಷಿ ನಡೆಸಿದರು.
ಸುರಿಯುವ ಮಳೆಯನ್ನು ಲೆಕ್ಕಸಿದೆ ನೇಜಿ ನಾಟಿ ಮಾಡಿದರು. ಕಾಲೇಜಿನ ಉಪನ್ಯಾಸಕರು ಹಾಗೂ ರೈತಾಪಿ ಮಹಿಳೆಯರು ನೇಜಿ ನಾಟಿ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಬಳಿಕ ಕೆಸರು ಗದ್ದೆಯಲ್ಲಿ ಹಗ್ಗಜಗ್ಗಾಟ ಮೊದಲಾದ ಆಟೋಟ ಸ್ಪರ್ಧೆಗಳನ್ನು ನಡೆಸಿ ಸಂಭ್ರಮಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಅಂತರಗುತ್ತು ಸೀತರಾಮ ರೈ, ಕಾಲೇಜಿನ ಪ್ರಾಂಶುಪಾಲ ಶೇಖರ ರೈ, ಕಾರ್ಯಕ್ರಮ ಸಂಯೋಜಕಿ ಇಂದಿರಾ ಮೊದಲಾದವರು ವಿದ್ಯಾರ್ಥಿಗಳ ಕೃಷಿ ಚಟುವಟಿಕೆಗೆ ಸಾಥ್ ನೀಡಿದರು.





