ಬಿ.ಸಿ.ರೋಡ್; ವ್ಯಕ್ತಿಯ ಅಪಹರಣಕ್ಕೆ ಯತ್ನ ಆರೋಪ : ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಪೊಲೀಸರು

ಬಂಟ್ವಾಳ, ಜು. 21: ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ನಡುವೆ ಮಾರಾಮಾರಿ ನಡೆದು ತಂಡಲ್ಲಿದ್ದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಲು ವಿಫಲ ಯತ್ನ ನಡೆಸಿರುವ ಘಟನೆ ಬಿ.ಸಿ.ರೋಡ್‌ನಲ್ಲಿ ಶನಿವಾರ ಸಂಜೆ ನಡೆದಿದೆ.
ಪರಿಚಯವಿದ್ದ ತಂಡಗಳ ನಡುವೆ ಖಾಸಗಿ ವಿಚಾರಕ್ಕೆ ಸಂಬಂಧಿಸಿ ಬಿ.ಸಿ.ರೋಡಿನ ಮಿನಿವಿಧಾನ ಸೌಧ ಸಮೀಪ ಮಾತಿನಚಕಮಕಿ ನಡೆದಿದೆನ್ನಲಾಗಿದ್ದು, ತದನಂತರ ಮಾರಾಮಾರಿ ನಡೆದು, ಇನ್ನೊಂದು ತಂಡದಲ್ಲಿದ್ದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಅರಿತ ಪೊಲೀಸರು, ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ನಾಕಾಬಂಧಿ ಹಾಕುವ ಮೂಲಕ ವಾಹನಗಳ ತಪಾಸಣೆಗೆ ಮುಂದಾಗಿತೆನ್ನಲಾಗಿದೆ.
ತಪಾಸಣೆಯ ವೇಳೆ ಪೊಲೀಸರನ್ನು ಕಂಡ ವ್ಯಕ್ತಿಗಳು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಅಪಹರಣಕ್ಕೊಳಗಿದ್ದೆನ್ನಲಾದ ವ್ಯಕ್ತಿಯನ್ನು ಪೊಲೀಸರು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಸಾರ್ವಜನಿಕರಿಗೆ ಕೆಲವೊಂದು ಗೊಂದಲಗಳು ಉಂಟಾಗಿದ್ದು, ಸಿನಿಮೀಯ ಶೈಲಿಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೆ ಬರಬೇಕಾಗಿದೆ.







