‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018’ಕ್ಕೆ ಜಿಪಂ ಅಧ್ಯಕ್ಷರಿಂದ ಚಾಲನೆ

ಉಡುಪಿ, ಜು.21: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ಕ್ಕೆ ಹೊಸದಿಲ್ಲಿಯಲ್ಲಿ ಚಾಲನೆ ನೀಡಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಸಹ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಈ ಸರ್ವೇಕ್ಷಣೆಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳಿಗೆ ಶನಿವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯು ಈಗಾಗಲೇ ಬಯಲು ಮುಕ್ತ ಶೌಚ ಜಿಲ್ಲೆಯಾಗಿ ಘೋಷಿತವಾಗಿದೆ. ಪ್ರಸ್ತುತ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣಯಲ್ಲೂ ಜಿಲ್ಲೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವಂತಾಗಲಿ. ಇದಕ್ಕಾಗಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ, ಗ್ರಾಮೀಣ ಜನತೆಗೆ ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದರು.
ಆ.1ರಿಂದ 30ರವರೆಗೆ ದೇಶದ 6,980 ಗ್ರಾಮಗಳ 34,900 ಸಾರ್ವಜನಿಕ ಸ್ಥಳಗಳಲ್ಲಿ, 50 ಲಕ್ಷ ಜನರ ಅಭಿಪ್ರಾಯ ಸಂಗ್ರಹ ಮೂಲಕ ನಡೆಯುವ ಈ ಸಮೀಕ್ಷೆಯಲ್ಲಿ ಸಾರ್ವಜನಿಕ ಸ್ಥಳದ ಸಮೀಕ್ಷೆ, ಸ್ವಚ್ಚತೆಯ ಬಗ್ಗೆ ಜನರ ಗ್ರಹಿಕೆ, ಕಾರ್ಯಕ್ರಮ ಸುಧಾರಣೆಗೆ ಜನರ ಶಿಫಾರಸ್ಸುಗಳು ಪ್ರಮುಖ ಮಾನದಂಡ ಗಳಾಗಿದ್ದು, ನೋಡಲ್ ಆಧಿಕಾರಿಗಳು ತಮ್ಮ ಅಧೀನದ ಗ್ರಾಪಂಗಳಿಗೆ ಈ ಕುರಿತಂತೆ ಸೂಕ್ತ ನಿರ್ದೇಶನ ನೀಡಿ, ಜಿಲ್ಲೆ ಉತ್ತಮ ಸಾಧನೆ ಮಾಡುವಂತೆ ಕಾರ್ಯನಿರ್ವಹಿಸುವಂತೆ ದಿನಕರ ಬಾಬು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗೆ ಕೇಂದ್ರದಿಂದ ತಂಡ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಎಲ್ಲೆಡೆ ಸ್ವಚ್ಚತೆ ಕಾಪಾಡುವಂತೆ ತಿಳಿಸಿದ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ನೋಡಲ್ ಅಧಿಕಾರಿಗಳು ಗ್ರಾಮ ದಲ್ಲಿರುವ ಎಲ್ಲಾ ಮನೆಗಳು ಕಡ್ಡಾಯವಾಗಿ ಶೌಚಾಲಯ ಬಳಸುವದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ, ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳ ಸಮುದಾಯ ಶೌಚಾಲಯದ ಸ್ವಚ್ಛತೆ ಹಾಗೂ ಬಳಕೆ ಬಗ್ಗೆ ಪರಿಶೀಲನೆ ನಡೆಸುವಂತೆ, ಶಾಲೆ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆ ಮಾರುಕಟ್ಟೆ ಸ್ಥಳ ಮತ್ತು ಧಾರ್ಮಿಕ ಸ್ಥಳದಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ, ಮನೆ ವಾಣಿಜ್ಯ ಸಂಕೀರ್ಣಗಳಲ್ಲಿ ತ್ಯಾಜ್ಯದ ಸೂಕ್ತ ವಿಲೇವಾರಿಗೆ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ ಯರು, ಸ್ವಸಹಾಯ ಸಂಘದ ಸದಸ್ಯರು ಮತ್ತು ಶಾಲಾ ಮಕ್ಕಳ ಮೂಲಕ ಮನೆ ಮನೆಗೆ ಮಾಹಿತಿ ನೀಡಿ, ಕರಪತ್ರ ವಿತರಿಸಲು ಹಾಗೂ ಸ್ಥಳೀಯ ಜಿಪಂ, ತಾಪಂ ಮತ್ತು ಗ್ರಾಪಂ ಜನಪ್ರತಿನಿಧಿಗಳು ಮತ್ತು ಎಸ್‌ಡಿಎಂಸಿ ಸದಸ್ಯರ ಸಹಕಾರ ಪಡೆದು ಕಾರ್ಯ ನಿರ್ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹಾಗೂ ಸ್ವಚ್ಛ ಸರ್ವೇಕ್ಷಣೆಗೆ ನಿಯೋಜಿಸಿದ್ದ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.







