ಚಿರತೆ ಚರ್ಮ ಮಾರಾಟ: 8 ಜನರ ಬಂಧನ

ಬೆಂಗಳೂರು, ಜು.21: ಅಕ್ರಮವಾಗಿ ಚಿರತೆ ಪ್ರಾಣಿಯ ಚರ್ಮ, ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪದಡಿ 8 ಜನರನ್ನು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ತೆಪ್ಪಗಿ ನಿವಾಸಿ ಮಂಜುನಾಥ್ ರತ್ನಕರ್ ನಾಯಕ್(30), ಹೊನ್ನಾವರ ಬಳಕೂರು ಕೃಷ್ಣಗಣಪ್ಪ ನಾಯಕ್(60) ಉದಯ್ ಗಂಗಾಧರ್, ಉದಯ್ ರಾಮನಾಯ್ಕಾ, ಮಹೇಂದ್ರ ಹೆಗಡೆ, ಮಂಜುನಾಥ ನಾಯ್ಕಾ, ರಾಘವೇಂದ್ರ ನಾರಾಯಣ ಪೂಜಾರಿ, ಸುನೀಲ್ ನಾಯ್ಕಾ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕಿರ್ಲೋಸ್ಕರ್ ಫೌಡ್ರಿ ಹತ್ತಿರ ಒಂದು ಗೋಣಿ ಚೀಲದೊಳಗೆ ಚಿರತೆ ಚರ್ಮವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಜು.19ರಂದು ಪಿಎಸ್ಸೈ ವೆಂಕಟರಮಣಪ್ಪ, ಪೊಲೀಸ್ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಒಂದು ಚಿರತೆ ಮತ್ತು ಜಿಂಕೆ ಚರ್ಮ ಹಾಗೂ 6 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳುವಲ್ಲಿ ಮಹಾಲಕ್ಷ್ಮೀಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.







