ಮಧ್ಯಸ್ಥಿಕೆ ಪ್ರಕ್ರಿಯೆಗೆ ಕರಾವಳಿಯ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ: ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕಾ
ನ್ಯಾಯಾಧೀಶರಿಗೆ ಮಧ್ಯಸ್ಥಿಕೆ ಕುರಿತ ಕಾರ್ಯಾಗಾರ
ಮಂಗಳೂರು, ಜು. 22: ನ್ಯಾಯಾಲಯದ ಮುಂದಿರುವ ವಿವಿಧ ಪ್ರಕರಣಗಳನ್ನು ಮಧ್ಯಸ್ಥಿಕೆಯಲ್ಲಿ ತೀರ್ಮಾನಿಸುವ ಪ್ರಕ್ರಿಯೆ ಉತ್ತಮವಾದ ಪರ್ಯಾಯ ವ್ಯವಸ್ಥೆ ಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ದ.ಕ. ಮತ್ತು ಉಡುಪಿ ಜಿಲ್ಲೆೆಯ ನ್ಯಾಯಾಧೀಶರಿಗೆ ಮಧ್ಯಸ್ಥಿಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಯಲ್ಲೂ ನೇಮಕಾತಿ ನಡೆದಿದೆ. ಹೆಚ್ಚಾಗಿ ವಕೀಲರನ್ನೇ ಇಂತಹ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಎಲ್ಲ ಪ್ರಕರಣಗಳನ್ನೂ ಮಧ್ಯಸ್ಥಿಕೆ ಮೂಲಕ ಬಗೆಹರಿಸಬಹುದು. ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಬಾಕಿ ಉಳಿದ ಸಿವಿಲ್ ಮತ್ತು ಕೌಟುಂಬಿಕ ಪ್ರಕರಣಗಳನ್ನು ನ್ಯಾಯಾಧೀಶರು ಮಧ್ಯಸ್ಥಿಕೆಯ ತೀರ್ಮಾನಕ್ಕೆ ಸೂಚಿಸಬಹುದು. ಮಧ್ಯಸ್ಥಿಕೆ ಪ್ರಕ್ರಿಯೆ ಹೆಚ್ಚಾದಂತೆ ನ್ಯಾಯಾಧೀಶರ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಹೇಳಿದರು.
60 ದಿನಗಳ ಗಡುವು: ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ತೀರ್ಮಾನ ಮಾಡಲು 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮನವಿ ಮಾಡಿದರೆ ಹೆಚ್ಚುವರಿ ಕಾಲಾವಕಾಶ ನೀಡಲು ಸಮ್ಮತಿ ನೀಡಲಾಗುತ್ತದೆ. ನ್ಯಾಯಾಲಯದ ತೀರ್ಪಿನಿಂದ ಒಬ್ಬರಿಗೆ ಗೆಲುವಾದರೆ ಮತ್ತೊಬ್ಬರಿಗೆ ಸೋಲಾಗುವುದು ಖಚಿತ. ಆದರೆ ಮಧ್ಯಸ್ಥಿಕೆಯ ಮೂಲಕ ಪ್ರಕರಣ ಇತ್ಯರ್ಥಗೊಳಿದರೆ ಎರಡೂ ಕಡೆಯವರಿಗೆ ಸೋಲಾಗಲು ಸಾಧ್ಯವಿಲ್ಲ. ಇಬ್ಬರೂ ಪರಸ್ಪರ ಸಮ್ಮತದೊಂದಿಗೆ ಸಮಸ್ಯೆೆಯಿಂದ ಮುಕ್ತರಾಗುತ್ತಾರೆ. ದೇಶಾದ್ಯಂತ ಈ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಆಶಾದಾಯಕ ವಿಚಾರ ಎಂದು ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ತಿಳಿಸಿದರು.
ಮಂಗಳೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಮಾತನಾಡಿ, ನ್ಯಾಯಾಲಯದಲ್ಲಿ ದಾಖಲೆಗಳು, ಸಾಕ್ಷ್ಯಾಧಾರಗಳು ಅಗತ್ಯ. ಆದರೆ ಮಧ್ಯಸ್ಥಿಕೆ ವ್ಯವಸ್ಥೆೆ ಅಷ್ಟು ಸುಲಭವಲ್ಲ. ಕಕ್ಷಿದಾರರ ಮನವೊಲಿಸುವ ಪ್ರಕ್ರಿಯೆ ನಡೆಸಲು ಪರಿಣತರು ಬೇಕು ಎಂದು ಹೇಳಿದರು.
*ಕಾನೂನು ವ್ಯಾಪ್ತಿ ಮೀರಲು ಸಾಧ್ಯವಿಲ್ಲ: ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರುಳೀಧರ ಪೈ ಬಿ. ಕೆಲವೊಂದು ಪ್ರಕರಣಗಳನ್ನು ಮಧ್ಯಸ್ಥಿಕೆಯ ತೀರ್ಮಾನಕ್ಕೆ ವಹಿಸುವಾಗ ಕಾನೂನು ತೊಡಕುಗಳಾಗಬಹುದು. ಆವಾಗ ನ್ಯಾಯಾಧೀಶರು ಕಾನೂನು ವ್ಯಾಪ್ತ್ತಿಯನ್ನು ಮೀರದೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಮುಖ್ಯ ತರಬೇತುದಾರ ಸುಶೀಲಾ ಎಸ್., ತರಬೇತುದಾರ ನಂದಗೋಪಾಲ್ ಬಿ. ಕಾರ್ಯಾಗಾರ ನಡೆಸಿಕೊಟ್ಟರು.
ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ವಂದಿಸಿದರು.







