ಮೈತ್ರಿ ಸರಕಾರ ಮನೆಯೊಂದು ಮೂರು ಬಾಗಿಲು: ಸಂಸದ ಸುರೇಶ್ ಅಂಗಡಿ ಟೀಕೆ
ಬೆಂಗಳೂರು, ಜು. 22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದ್ದು, ಈ ಮೈತ್ರಿಕೂಟ ಸರಕಾರ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸಂಸದ ಸುರೇಶ್ ಅಂಗಡಿ ಇಂದಿಲ್ಲಿ ಟೀಕಿಸಿದ್ದಾರೆ.
ರವಿವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನೊಂದು ಕಡೆ ಡಿಸಿಎಂ ಡಾ.ಪರಮೇಶ್ವರ್ ಮತ್ತು ಮತ್ತೊಂದು ಕಡೆ ಸಿದ್ದರಾಮಯ್ಯ ಇದ್ದಾರೆ ಎಂದು ಲೇವಡಿ ಮಾಡಿದರು.
ಸರಕಾರ ಮನೆಯೊಂದು ಮೂರು ಬಾಗಿಲಿನಿಂದಾಗಿ ಜನ ಸಾಮಾನ್ಯರ ಯಾವ ಕೆಲಸಗಳೂ ಆಗುತ್ತಿಲ್ಲ. ಅಧಿಕಾರಿಗಳ ಮೇಲೆ ಸರಕಾರಕ್ಕೆ ಹಿಡಿತವಿಲ್ಲ. ಜನತೆ ತೆರಿಗೆ ಪಾವತಿ ಮಾಡುತ್ತಿದ್ದು, ಹಣಕಾಸಿನ ಕೊರತೆ ಇಲ್ಲ. ಆದರೆ, ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಂದು ರೀತಿ ‘ಮಮ್ಮಿ ಮಗ’. ಆದುದರಿಂದಲೆ ಲೋಕಸಭೆಯಲಿ ಆ ರೀತಿಯ ವರ್ತನೆ ತೋರಿದ್ದಾರೆ. ಸಂಸತ್ತಿನ ಗೌರವವನ್ನು ರಾಹುಲ್ ಕಡಿಮೆ ಮಾಡಿದ್ದಾರೆ. ವಿಪಕ್ಷದಲ್ಲಿ ಗಂಭೀರತೆ ಇಲ್ಲ. ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಂಸದ ಪ್ರಹ್ಲಾದ್ ಜೋಶಿ, ಸ್ಪೀರ್‌ಗೆ ನೋಟಿಸ್ ನೀಡಿದ್ದಾರೆ ಎಂದರು.
ಐ-ಫೋನ್ ವಾಪಸ್: ಡಿ.ಕೆ.ಶಿವಕುಮಾರ್ ನನಗೆ ಕಳುಹಿಸಿಕೊಟ್ಟಿರುವ ಐ- ಫೋನ್ ಅನ್ನು ವಾಪಸ್ ಕೊಡುತ್ತೇನೆ ಎಂದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಬೇರೆಯವರಿಗೆ ಟಿಕೆಟ್ ನೀಡಿದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಣೆ ನೀಡಿದರು.