ತಳ ಸಮುದಾಯ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ನೀಡಲಿ: ಶಾಸಕ ಬಸವರಾಜ್ ಮತ್ತಿಮೂಡ

ಬೆಂಗಳೂರು, ಜು.22: ತಳ ಸಮುದಾಯಗಳು ಸರ್ವತೋಮುಖವಾಗಿ ಅಭಿವೃದ್ಧಿಯತ್ತ ಸಾಗಬೇಕಾದರೆ ಶಿಕ್ಷಣವೆ ರಹದಾರಿಯೆಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ ಹೇಳಿದರು.
ರವಿವಾರ ಕರ್ನಾಟಕ ರಾಜ್ಯ ಶರಣ ಹರಳಯ್ಯ ಮತ್ತು ಸಂತ ರವಿದಾಸ (ಚಮ್ಮಾರ್) ಮಹಾಸಭಾ ಉದ್ಘಾಟಿಸಿ ಮಾತನಾಡಿದ ಅವರು, ತಳ ಸಮುದಾಯದ ವಿದ್ಯಾವಂತ ಯುವಕ, ಯುವತಿಯರಿಗೆ ಆರ್ಥಿಕ ಸಹಾಯಹಸ್ತ ನೀಡಬೇಕೆಂದು ಆಶಿಸಿದರು.
ತಳ ಸಮುದಾಯದಲ್ಲಿ ಹಲವು ಉತ್ತಮ ಸ್ಥಾನದಲ್ಲಿರುವ ಅಧಿಕಾರಿಗಳಿದ್ದಾರೆ. ಆದರೆ, ಅವರು ಪರಿಚಯ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಅಧಿಕಾರಿಗಳಾಗಿ ಇಂತಹ ಕೀಳರಿಮೆ ಸ್ಥಿತಿಯಲ್ಲಿ ನರಳಬಾರದು. ತಮ್ಮ ಸಮುದಾಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರು ವಿವಿಯ ಪ್ರೊ.ಎ.ಎಸ್.ರಾಯಮಾನೆ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ನಡೆಸುತ್ತಿದೆ. ಅಲ್ಲಿ ನಮ್ಮವರು ದಾಖಲಾಗುವ ಪ್ರಮಾಣ ಕಡಿಮೆ ಇದೆ. ಸಮಗಾರ ಸಮುದಾಯದ ಎಷ್ಟೇ ಜನ ಬಂದರೂ ನಾವು ಉತ್ತಮ ಮಾರ್ಗದರ್ಶನ ನೀಡಿ ಸಹಾಯ ಮಾಡಲು ಸಿದ್ದರಿದ್ದೇವೆ. ಸಮುದಾಯ ಈ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಸಿಐಡಿ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ, ಡಾ.ಮಾರುತಿ ಹೆಬ್ಬಳ್ಳಿ, ಸಮಾಜ ಸೇವಕರಾದ ನಿಂಗಮ್ಮ ಮಾರುತಿ ರಾಮದುರ್ಗ, ವಕೀಲರಾದ ವೈ.ಸಿ.ಕಾಂಬಳೆ, ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಮಬ್ರುಂಕರ್ ಮತ್ತಿತರರಿದ್ದರು.







