ಬಿಗ್ ಲಿಟ್ಲ್ ಪ್ರಶಸ್ತಿ ನಾಮನಿರ್ದೇಶನಕ್ಕೆ ಆಹ್ವಾನ
ಬೆಂಗಳೂರು, ಜು.23: ಮಕ್ಕಳ ಸಾಹಿತ್ಯಕ್ಕೆ ಗಣನೀಯವಾದ ಕೊಡುಗೆ ನೀಡಿರುವ ಭಾರತೀಯ ಲೇಖಕರು, ಕಲಾವಿದರನ್ನು ಗೌರವಿಸಲು ನೀಡುವ ಬಿಗ್ ಲಿಟ್ಲ್ ಬುಕ್ ಅವಾರ್ಡ್‌ನ ತನ್ನ ಮೂರನೆ ಆವೃತ್ತಿಯ ಪ್ರಶಸ್ತಿಗಾಗಿ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ.
ಪ್ರತಿ ವರ್ಷವೂ ಒಂದು ಭಾರತೀಯ ಭಾಷೆಯನ್ನು ಪ್ರಶಸ್ತಿಗಾಗಿ ಗುರುತಿಸಲಿದ್ದು, 2018 ನೆ ಸಾಲಿಗೆ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಕೊಡುಗೆ ನೀಡಿರುವ ಲೇಖಕರು ನಾಮ ನಿರ್ದೇಶನಕ್ಕೆ ಅರ್ಹರಾಗಿರುತ್ತಾರೆ.
ಕಲಾವಿದರಿಗೆ ನಿರ್ದಿಷ್ಟವಾದ ಭಾಷಾ ಗಡಿಯಿಲ್ಲ. ಯಾವುದೇ ಭಾಷೆಗೆ ಸಂಬಂಧಿಸಿದ ಕಲಾವಿದರನ್ನು ನಾಮನಿರ್ದೇಶನ ಮಾಡಬಹುದು. ನಾಮ ನಿರ್ದೇಶನ ಪ್ರಕ್ರಿಯೆಯು ಆ.5 ರಂದು ಅಂತಿಮಗೊಳ್ಳಲಿದೆ.
ಈ ಪ್ರಶಸ್ತಿ ನೀಡುವ ಮುಖ್ಯ ಉದ್ದೇಶ, ಪ್ರಾದೇಶಿಕ ಭಾಷೆಯ ಸಾಹಿತ್ಯವನ್ನು ಮುಂಚೂಣಿಗೆ ತರುವುದಾಗಿದೆ. ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಅಪಾರವಾದ ಶ್ರೀಮಂತಿಕೆಯನ್ನು ಹೊಂದಿದೆ. ಮುಖ್ಯವಾಹಿನಿಯ ಚರ್ಚೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಹೀಗಾಗಿ, ಈ ಪ್ರಶಸ್ತಿಯ ಮೂಲಕ ಯುವ ಓದುಗರು, ಪೋಷಕರು, ಶಾಲೆಗಳು, ಪ್ರಕಾಶಕರನ್ನು ಭೇಟಿಯಾಗಲು ಹಾಗೂ ವಿವಿಧ ಲೇಖಕರು, ಕಲಾವಿದರ ಕೃತಿಗಳನ್ನು ಓದಲು ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.





