ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಜು. 23: ಸರಕಾರಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲಕ್ಷಾಂತರ ರೂ. ಡೊನೇಷನ್ ನೀಡಿ ಖಾಸಗಿ ಶಾಲೆಗಳಿಗೆ ಸೇರುವವರಿಗೆ ಉಚಿತ ಬಸ್ ಪಾಸ್ ನೀಡುವ ಅಗತ್ಯವಿಲ್ಲ ಎಂದರು.
ಉಚಿತ ಬಸ್ ಪಾಸ್ ವಿಚಾರದಲ್ಲಿ ಬಿಜೆಪಿ ಮುಖಂಡರು ಎಬಿವಿಪಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ. ನನಗೆ ಅವರಿಗಿಂತ ಚೆನ್ನಾಗಿ ರಾಜಕೀಯ ಮಾಡುವುದು ಗೊತ್ತಿದೆ ಎಂದು ಕುಮಾರಸ್ವಾಮಿ ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತ್ಯೇಕ ರಾಜ್ಯ ವಿವಾದ ಹುಟ್ಟು ಹಾಕುತ್ತಿರುವವರಿಗೆ ಈ ರಾಜ್ಯವನ್ನು ಮುನ್ನಡೆಸುವ ತಾಕತ್ತಿಲ್ಲ. ಬೆಂಗಳೂರಿನ ಶೇ.65 ರಷ್ಟು ಅನುದಾನ ಉತ್ತರ ಕರ್ನಾಟಕದ ಅಭಿವೃದ್ದಿಗೆ ಬಳಕೆ ಆಗುತ್ತಿರುವುದನ್ನು ಅವರು ಮರೆಯಬಾರದು ಎಂದ ಅವರು, ರೈತರ ಸಂಪೂರ್ಣ ಸಾಲಮನ್ನಾಕ್ಕೆ ಉತ್ತರ ಕರ್ನಾಟಕ ರೈತರೇ ಆಗ್ರಹಿಸಿದ್ದರು ಎಂದರು.
ನಿಮಗೆ ಮತ ಹಾಕುವ ವೇಳೆ ಮಾತ್ರ ನನ್ನ ನೆನಪಾಗಲಿಲ್ಲ. ಜಾತಿ, ಧರ್ಮವನ್ನು ನೋಡಿ ಓಟು ಹಾಕಿದವರಿಗೆ ನನ್ನನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದ ಕುಮಾರಸ್ವಾಮಿ, ಖಾಸಗಿ ಸುದ್ದಿವಾಹಿನಿಗಳು ಸಣ್ಣ ಘಟನೆಗಳನ್ನು ಮುಂದಿಟ್ಟುಕೊಂಡು ನನ್ನನ್ನು ಪ್ರಶ್ನಿಸುತ್ತಿವೆ. ಇದು ಮಾಧ್ಯಮ ಧರ್ಮವೇ ಎಂದು ಪ್ರಶ್ನಿಸಿದರು.
ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳು ನನಗೆ ಎರಡು ಕಣ್ಣುಗಳು ಇದ್ದ ಹಾಗೆ. ಈ ಕ್ಷೇತ್ರಗಳನ್ನು ಅವಳಿ ನಗರವನ್ನಾಗಿ ಮಾಡಲಾಗುವುದು. ಅಲ್ಲದೆ ಈ ವರ್ಷದೊಳಗೆ ಎರಡು ಕ್ಷೇತ್ರಗಳಿಗೆ 2 ಸಾವಿರ ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಾಗೆಯೇ ರಾಮನಗರ-ಚನ್ನಪಟ್ಟಣ ಹೆದ್ದಾರಿ ಮಧ್ಯೆ 500 ಎಕರೆ ಪ್ರದೇಶದಲ್ಲಿ ರೇಶ್ಮೆ ಸೂಪರ್ ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದರು.