‘ನಾಡಿಗೆ ನಮಸ್ಕಾರ’ದ 17, ‘ಸಾಧನ ಸಂಚಯ’ದ ಕೃತಿ ಅನಾವರಣ
'ಕಾಂತಾವರದಲ್ಲಿ ಪುಸ್ತಕೋತ್ಸವ 2018'

ಮೂಡುಬಿದಿರೆ, ಜು. 23: ಕನ್ನಡ ಭಾಷೆ, ಅದರೊಂದಿಗೆ ಬೆರೆತುಕೊಂಡ ವೈಚಾರಿಕ, ಕಲಾತ್ಮಕ ಸಂಸ್ಕೃತಿ ಉಳಿಯದಿದ್ದರೆ ಈ ನಾಡು, ನುಡಿಯ ಪರಂಪರೆಗೆ ಕಂಟಕ ಒದಗಿ ಬರಲಿದೆ. ಸ್ಪಂದನದ ಕೊರತೆಯೇ ಇಂದಿನ ಸಾಂಸ್ಕೃತಿಕ ತಲ್ಲಣಗಳ ಮೂಲ ಕಾರಣವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ’ ಎಂದು ಚಿಂತಕ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಅಭಿಪ್ರಾಯಪಟ್ಟರು.
ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಕನ್ನಡ ಭವನದಲ್ಲಿ ರವಿವಾರ ನಡೆದ ‘ನಾಡಿಗೆ ನಮಸ್ಕಾರ ’ ಗ್ರಂಥಮಾಲೆಯ 17 (ಸಂಖ್ಯೆ 230ರಿಂದ 246)ಪುಸ್ತಕಗಳು ಮತ್ತು ‘ಸಾಧನ ಸಂಚಯ’ದ ಒಂದು ಕೃತಿಯ ಅನಾವರಣ ಒಳಗೊಂಡ ‘ಪುಸ್ತಕೋತ್ಸವ-2018 ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಭಾಷೆ, ಕಲೆ, ವೈಚಾರಿಕತೆಯ ಉಳಿವಿಗೆ ಪುಸ್ತಕೋತ್ಸವದಂಥ ಕಾರ್ಯಕ್ರಮ ಪ್ರೇರಣೆಯಾಗಲಿ’ ಎಂದು ಹಾರೈಸಿದರು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ ವರದೇಶ ಹಿರೇಗಂಗೆ ಅಧ್ಯಕ್ಷತೆ ವಹಿಸಿದ್ದರು.
ನವಕರ್ನಾಟಕ ಪ್ರಕಾಶನದ ವ್ಯ. ನಿರ್ದೇಶಕ, ‘ಹೊಸತು’ ಮಾಸಪತ್ರಿಕಾ ಸಂಪಾದಕ ಡಾ ಸಿದ್ಧನಗೌಡ ಪಾಟೀಲ ಅವರು 18 ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಸಭಾಧ್ಯಕ್ಷ ಪ್ರೊ ವರದೇಶ ಹಿರೇಗಂಗೆ ಅವರು ಮಾತನಾಡಿ, ‘ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಜೀವನದೃಷ್ಟಿ,ಅನುಭವಗಳನ್ನು ಹಿಡಿದಿಡುವ ಸೃಷ್ಟಿಶೀಲ ಮಾಧ್ಯಮವೂ ಹೌದು ಎಂದರು.
ಅಲ್ಲಮಪ್ರಭು ಪೀಠದ ಗೌಕಾರ್ಯನಿರ್ವಾಹಕ ರಾಯಚೂರಿನ ಎಚ್. ಎಂ. ಮಲ್ಲಿಕಾರ್ಜನ ಹಿರೇಮಠ ಮುಖ್ಯಅತಿಥಿಯಾಗಿದ್ದರು. ಕೃತಿಗಳಲ್ಲಿ ಅನಾವರಣಗೊಂಡು ಹಾಜರಿದ್ದವರು, ಸಂಪಾದಕ ಡಾಬಿ. ಜನಾರ್ದನ ಭಟ್, ಮುದ್ರಕ ಕಲ್ಲೂರು ನಾಗೇಶ್, ಲೇಖಕರು ಹಾಗೂ ಪ್ರಾಯೋಜಕರನ್ನು ಗೌರವಿಸಲಾಯಿತು.
ಕರ್ನಾಟಕ, ಕೇರಳ ಲಲಿತ ಕಲಾ ಅಕಾಡೆಮಿ ಪುರಸ್ಕೃತ ಕಲಾವಿದ ಪಿ. ಎಸ್ . ಪುಂಚಿತ್ತಾಯ ಅವರು ಬೇಕಲಕೋಟೆಯ ಸಮುದ್ರತೀರವನ್ನು ‘ಎಕ್ರಿಲಿಕ್’ ವರ್ಣಚಿತ್ರರಚನಾ ಪ್ರಾತ್ಯಕ್ಷಿಕೆ ಮೂಲಕ ಚಿತ್ರಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಅವರು ‘ಶ್ರೀಕೃಷ್ಣ ಸುಧಾಮ’ ಕಥಾ ಕೀರ್ತನೆ (ತಬ್ಲಾ: ಸುರೇಶ್ ಶೆಟ್ಟಿ ಮಂಗಳೂರು, ಆರ್ಗನ್ : ಸತೀಶ್ ಸುರತ್ಕಲ್) ನಡೆಸಿಕೊಟ್ಟರು.
ಸ್ಥಾಪಕಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ ಪ್ರಸ್ತಾವನೆಗೈದರು. ವಿವಿಧ ಕಲಾಪಗಳನ್ನು ಉಪಾಧ್ಯಕ್ಷ ವಿಠಲ ಬೇಲಾಡಿ, ಪ್ರ. ಕಾರ್ಯದರ್ಶಿ ಸದಾನಂದ ನಾರಾವಿ, ಸಹಕಾರ್ಯದರ್ಶಿ ಸತೀಶ್‌ಕುಮಾರ್ ಕೆಮ್ಮಣ್ಣು ಹಾಗೂ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಕಾರ್ಯಕ್ರಮ ಸಂಚಾಲಕ ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು.
ಅನಾವರಣಗೊಂಡ ಕೃತಿಗಳು: (ಆವರಣದಲ್ಲಿ ಲೇಖಕರು)
-ಹುರುಳಿ ಭೀಮರಾವ್ (ಡಾ ಬಿ. ಜನಾರ್ದನ ಭಟ್), ಕೃಷ್ಣ ಸೋಮಯಾಜಿ (ಸದಾನಂದ ನಾರಾವಿ, ಕುಮಾರ ವೆಂಕಣ್ಣ (ಕೆ.ಪಿ. ಸ್ವಾಮಿ), ಕೆಮ್ಮಣ್ಣು ನಾರ್ಣಪ್ಪಯ್ಯ (ಡಾ ಯೋಗೀಶ್ ಕೈರೋಡಿ), ಮಾಜಿ ಶಾಸಕ ದೂಮಪ್ಪ (ರಮಾನಾಥ ಕೋಟೆಕಾರು), ಪೆರುವೋಡಿ ನಾರಾಯಣ ಭಟ್ (ಡಾ. ನಾ. ಕಾರಂತ ಪೆರಾಜೆ), ಪಡಾರು ಮಹಾಬಲೇಶ್ವರ ಭಟ್ (ಟಿ. ಕುಮಾರ ಸ್ವಾಮಿ), ಪ್ರೊ ಜಿ. ಆರ್.ರೈ (ವಿಜಯ ಶೆಟ್ಟಿ ಸಾಲೆತ್ತೂರು), ಪಿ. ಎಸ್. ಪುಂಚಿತ್ತಾಯ (ರಾಧಾಕೃಷ್ಣ ಉಳಿಯತಡ್ಕ), ಮ. ನವೀನ್ ಚಂದ್ರಪಾಲ್ (ಶ್ರೀರಾಮ ದಿವಾಣ), ಈಶ್ವರ ದೈತೋಟ (ಅನ್ನಪೂರ್ಣ ಹೆಗ್ಗಡೆ), ಬಿ. ಪುರಂದರ ಭಟ್ (ಪರೀಕ್ಷಿತ್ ತೋಳ್ಪಾಡಿ), ರಂಗಕರ್ಮಿ ಕೆ. ಕೆ. ಸುವರ್ಣ (ಡಾ ಭರತ್ ಕುಮಾರ್ ಪೊಲಿಪು). ಡಾ ಇಂದಿರಾ ಹೆಗ್ಗಡೆ (ಜ್ಯೋತಿ ಚೇಳಾರು), ಡಾ ವಿಘ್ನೇಶ್ವರ ವರ್ಮುಡಿ (ರವಿಶಂಕರ ಜಿ. ಕೆ.), ಕಾರ್ಕಡ ಮಹಾಬಲೇಶ್ವರ ಆಚಾರ್ಯ (ರತ್ನಾವತಿ ಜೆ. ), ಗುರುರಾಜ ಸನಿಲ್ (ಡಾ ಗಣನಾಥ ಎಕ್ಕಾರು) ಹಾಗೂ ಸಾಧನ ಸಂಚಯದ ದ್ವಿತೀಯ ಕೃತಿ ‘ಶಾಸ್ತ್ರ ಚೂಡಾಮಣಿ ಪ್ರೊ ಮಲ್ಲೇಪುರಂ’







