ಜಸ್ಟಿಸ್ ಫಾರ್ ಅಜಿತಾಬ್: ಟೆಕ್ಕಿ ನಾಪತ್ತೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಆನ್‌ಲೈನ್ ಅಭಿಯಾನ

ಬೆಂಗಳೂರು, ಜು.23: ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ಕುಮಾರ್ ಅಜಿತಾಬ್ ಕುರಿತು ಈವರೆಗೂ ಯಾವುದೇ ಸುಳಿವುಗಳು ಸಿಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಆನ್‌ಲೈನ್‌ನಲ್ಲಿ ಜಸ್ಟಿಸ್ ಫಾರ್ ಅಜಿತಾಬ್ ಅಭಿಯಾನವನ್ನು ಆರಂಭಿಸಲಾಗಿದೆ.
ಅಜಿತಾಬ್ ನಾಪತ್ತೆ ಪ್ರಕರಣ ಕುರಿತಂತೆ ಹಲವಾರು ಜನರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಆರೋಪಿಗಳನ್ನು ಸೆರೆಹಿಡಿಯಲು ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕು. ಸರಕಾರವನ್ನು ಮಲಗಲು ಬಿಡುವುದಿಲ್ಲ. ಇಂದು ಅಜಿತಾಬ್ ನಾಳೆ ಬೇರೆ ಇನ್ನಾದರೂ ಆಗಬಹುದು. ನಾನೂ ಕೂಡ ಆಗಬಹುದು. ಜಸ್ಟಿಸ್ ಫಾರ್ ಅಜಿತಾಬ್ ಎಂದು ಮಿಲಿಂದ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಟೆಕ್ಕಿ ಅಜಿತಾಬ್ ಸಹೋದರಿ ಎಸ್.ಪ್ರಜ್ಞಾ ಟ್ವೀಟ್ ಮಾಡಿ, ನ್ಯಾಯಾಲಯ ವಿಚಾರಣೆಗಳಿಂದ ವಿಶ್ವಾಸಗಳು ಹೋಗಿವೆ. ಕಳೆದ ಜು.5 ರಂದು ನಡೆದ ವಿಚಾರಣೆ ಬಹಳ ಬೇಸರವನ್ನುಂಟು ಮಾಡಿದೆ. ತನಿಖೆಯಲ್ಲಿ ಯಾವುದೇ ಬೆಳವಣಿಗೆಗಳಿಲ್ಲದಿದ್ದರೂ, ಕುಟುಂಬಸ್ಥರು ವಿಚಾರಣೆಗೆ ಹಾಜರಾಗಬೇಕಿದೆ. ಪ್ರಸ್ತುತ ಅಜಿತಾಭ್‌ಗಾಗಿ ಆನ್‌ಲೈನ್ ಅಭಿಯಾನ ಆರಂಭವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೂಲಕ ವಿಷಯವನ್ನು ತಲುಪಿಸಲಾಗುತ್ತದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
ಅಜಿತಾಭ್ ನಾಪತ್ತೆಯಾಗಿ 217 ದಿನಗಳು ಕಳೆದಿವೆ. ಈ ವರೆಗೂ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಫೆ.26 ರಿಂದಲೂ ಸಿಐಡಿ ತನಿಖೆ ನಡೆಸುತ್ತಿದೆ. ಪೊಲೀಸರಿಗೆ, ಎಸ್‌ಐಟಿ ಹಾಗೂ ಸಿಐಡಿ ಅಧಿಕಾರಿಗಳಿಗೆ ಕಳೆದ 7 ತಿಂಗಳಿಂದಲೂ ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. ಸಮಯ ವ್ಯರ್ಥ ಮಾಡದೆ ಅಧಿಕಾರಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದು ನಾಗರಿಕರ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ. ಪೊಲೀಸ್ ಇಲಾಖೆಗೆ ಇದು ಹೆಮ್ಮೆಯ ವಿಚಾರವಲ್ಲ ಎಂದು ತಿಳಿಸಿದ್ದಾರೆ.
ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂನಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಮಾಡುವ ಸಂಬಂಧ ಓಎಲ್‌ಎಕ್ಸ್‌ನಲ್ಲಿ ಮಾಹಿತಿ ಹಾಕಿದ್ದರು. ಓಎಲ್‌ಎಕ್ಸ್‌ನಲ್ಲಿ ಪ್ರಕಟಿಸಿದ ಬಳಿಕ ಅಜಿತಾಬ್ ಕರೆ ಬಂದಾಗಲೆಲ್ಲಾ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18 ರಂದು ಅವರ ಮೊಬೈಲ್‌ಗೆ ಕರೆಯೊಂದು ಬಂದಿತ್ತು. ಹೊರಗೆ ಹೋದ ಅಜಿತಾಬ್ ನಂತರ ವಾಪಸ್ ಆಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು.