ಕೊಣಾಜೆ ಗ್ರಾಮ ಸಭೆ: ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ತರಾಟೆ

ಕೊಣಾಜೆ, ಜು. 23: ಕೊಣಾಜೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೋಮವಾರದಂದು ಅಸೈಗೊಳಿಯ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರು ಟ್ಯಾಂಕರ್ ನೀರು ಸರಬರಾಜು ಟೆಂಡರ್, ವಿದ್ಯುತ್ ಸಮಸ್ಯೆ, ಎಸ್‌ಸಿ ಎಸ್‌ಟಿ ಅನುದಾನ ಬಳಕೆ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಪಂಚಾಯಿತಿ ಆಡಳಿತ ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು.
ಪಂಚಾಯಿತಿಯ ಅಧೀನದ ಕಟ್ಟಡಗಳಲ್ಲಿ ಅಂಗಡಿ ನಡೆಸುತ್ತಿರುವರು ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ ಮಾತ್ರವಲ್ಲದೆ ರಸ್ತೆ ಬದಿಗಳಲ್ಲಿ ಅದೆಷ್ಟೋ ಗೂಡಂಗಡಿಗಳು ನಿರ್ಮಾಣಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ವಿರುದ್ಧ ಪಂಚಾಯಿತಿ ಕ್ರಮಕೈಕೊಳ್ಳಬೇಕು. ಅಲ್ಲದೆ ಬಾಡಿಗೆ ಅಂಗಡಿಯವರ ವಿರುದ್ದ ಕ್ರಮ ಕೈಗೊಂಡು ಇಂತಹ ಗೂಡಂಗಡಿ ನಡೆಸುವವರಿಗಾದರೂ ಅವಕಾಶ ನೀಡಿದರೆ ಅವರು ಕೂಡಾ ನ್ಯಾಯಯುತವಾಗಿ ವ್ಯಾಪಾರ ನಡೆಸಬಹುದಲ್ಲವೇ ಎಂದು ಗ್ರಾಮಸ್ಥರು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಅವರು, ಈಗಾಗಲೇ ಅಂಗಡಿ ಮಾಲಿಕರಿಗೆ ಎಚ್ಚರಿಗೆ ನೀಡಿದ್ದೇವೆ. ಮಾನವೀಯತೆಯ ದೃಷ್ಟಿಯಿಂದ ಬಾಡಿಗೆ ಬಾಕಿಯಿರುವ ಅಂಗಡಿ ನಡೆಸುವವರ ವಿರುದ್ಧ ಹಲವಾರು ಬಾರಿ ಎಚ್ಚರಿಕೆ ನೀಡಿದ್ದೆವು. ಇದೀಗ ಮತ್ತೊಮ್ಮೆ ಅವರಿಗೆ ನೋಟೀಸ್ ಜಾರಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ವಿದ್ಯುತ್ ಲೈನ್ ಸಮಸ್ಯೆಯಿಂದ ಪದೇ ಪದೆ ವಿದ್ಯುತ್ ಕೈಕೊಡುತ್ತಿರುತ್ತದೆ. ಇದರಿಂದಾಗಿ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಓದಲು ಕಷ್ಟವಾಗುತ್ತಿದೆ. ಈ ಬಗ್ಗೆ ವಾರ್ಡ್ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದಾಗ ಪಂಚಾಯಿತಿ ಸದಸ್ಯರು ಉತ್ತರಿಸಿ ಈಗಾಗಲೇ ಮೆಸ್ಕಾಂನವರ ಗಮನಕ್ಕೆ ತಂದಿದ್ದೇನೆ. ಮೆಸ್ಕಾಂ ಅಧಿಕಾರಿ ಸಭೆಗೆ ಬಂದ ನಂತರ ಅವರ ಉತ್ತರ ನೀಡುತ್ತಾರೆ ಎಂದರು. ಮಧ್ಯಾಹ್ನದ ವರೆಗೂ ಮೆಸ್ಕಾಂ ಅಧಿಕಾರಿಗಳು ಬಂದಿಲ್ಲ ಸಭೆ ಮುಗಿದ ಬಳಿಕ ಬರುವುದೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಸ್ಕಾಲರ್‌ಶಿಪ್‌ಗೆ ಅರ್ಜಿಸಲ್ಲಿಸಿದರೂ ಇನ್ನೂ ಹಣ ಸಿಕ್ಕಿಲ್ಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಅನುದಾನಕ್ಕಾಗು ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಹಾಕಿ ಒಂದು ವರ್ಷವಾದರೂ ಇನ್ನೂ ಕೂಡ ಹಣ ಬಂದಿಲ್ಲ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಎಸ್‌ಸಿ ಎಸ್‌ಟಿ ಅನುದಾನವನ್ನು ಕೇವಲ ಒಂದೇ ಕಡೆ ಉಪಯೋಗಕ್ಕೆ ಬಾರದ ಹಲವು ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿ ದುರುಪಯೋಗ ಮಾಡುವುದಕ್ಕಿಂತ ಇನ್ನೂ ಮೂಲಭೂತ ಸೌಲಭ್ಯ ಇಲ್ಲದ ಪ್ರದೇಶಗಳಿಗೆ ಬಳಸಿ, ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗ ವಿದ್ಯಾರ್ಥಿಗಳ ಶಿಕ್ಷಣಕ್ಕಾದರೂ ಬಳಕೆ ಮಾಡಿ ಎಂದು ಆಗ್ರಹಿಸಿದರು. ಹಲವಾರು ವಿಷಯಗಳ ಕುರಿತು ಚರ್ಚೆಯ ಬಳಿಕ ವಿವಿಧ ಇಲಾಖೆಗಳಿಂದ ಬಂದಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಮಂಗಳೂರು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ ಕೆ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಬಾನು, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್ ರಾವ್, ಅಭಿವೃದ್ದಿ ಅಧಿಕಾರಿ ಸವಿತಾ, ಕಾರ್ಯದರ್ಶಿ ಶಾಲಿನಿ ಹಾಗೂ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







