ಮೋದಿಯನ್ನು ಅಪ್ಪಿಕೊಂಡಿದ್ದಕ್ಕೆ ರಾಹುಲ್ ರನ್ನು ಟೀಕಿಸಿದ್ದ ಆರ್‌ಜೆಡಿ ವಕ್ತಾರನ ಉಚ್ಚಾಟನೆ

ಹೊಸದಿಲ್ಲಿ, ಜು.23: ಕಳೆದ ವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರನ್ನು ಆಲಂಗಿಸಿದ್ದಕ್ಕಾಗಿ ಮತ್ತು ಕಣ್ಣು ಮಿಟುಕಿಸಿದ್ದಕ್ಕಾಗಿ ಮಿತ್ರಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದ ತನ್ನ ರಾಷ್ಟ್ರೀಯ ವಕ್ತಾರ ಶಂಕರ ಚರಣ ತ್ರಿಪಾಠಿ ಅವರನ್ನು ಆರ್‌ಜೆಡಿ ಸೋಮವಾರ ಪಕ್ಷದಿಂದ ಉಚ್ಚಾಟನೆಗೊಳಿಸಿದೆ.
ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ತ್ರಿಪಾಠಿ,ರಾಹುಲ್ ಕಳೆದ 15ವರ್ಷಗಳಿಂದಲೂ ಸಂಸದರಾಗಿದ್ದಾರೆ. ಅವರಂತಹ ನಾಯಕರು ಸದನದಲ್ಲಿ ಕಣ್ಣು ಮಿಟುಕಿಸುವುದನ್ನು ನಿರೀಕ್ಷಿಸಿರಲಿಲ್ಲ. ಅವರ ಕೃತ್ಯವು ಪ್ರಿಯಾ ಪ್ರಕಾಶ್ ಅವರು ಕಣ್ಣು ಮಿಟುಕಿಸಿದ್ದಕ್ಕೆ ಸಮನಾಗಿದೆ ಎಂದು ಟೀಕಿಸಿದ್ದರು. ಮಲಯಾಳಂ ಚಿತ್ರದ ವೀಡಿಯೊ ತುಣುಕಿನಲ್ಲಿ ಕಣ್ಣು ಮಿಟುಕಿಸುವ ಮೂಲಕ ವಾರಿಯರ್ ರಾತ್ರಿ ಬೆಳಗಾಗುವುದರಲ್ಲಿ ತಾರಾಪಟ್ಟವನ್ನು ಗಳಿಸಿದ್ದರು.
ರಾಹುಲ್ ವರ್ತನೆ ಬಾಲಿಶವಾಗಿತ್ತು ಮತ್ತು 2019ರ ಚುನಾವಣೆಯಲ್ಲಿ ತನ್ನನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯೆಂದು ತಿಳಿದುಕೊಂಡಿರುವ ವ್ಯಕ್ತಿಯಿಂದ ಇಂತಹ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ ಎಂದೂ ತ್ರಿಪಾಠಿ ಟೀಕಿಸಿದ್ದರು.





