ಉಡುಪಿ: ಹೇರೂರು ಸಮೀಪ ಪತಿಯಿಂದ ಪತ್ನಿಯ ಕೊಲೆ

ಬ್ರಹ್ಮಾವರ, ಜು.23: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಪತಿ ತನ್ನ ಪತ್ನಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ 6.30ರ ಸುಮಾರಿಗೆ ಹೇರೂರು ತೂಗು ಸೇತುವೆ ಸಮೀಪ ನಡೆದಿದೆ.
ಮೃತರನ್ನು ಹೇರೂರಿನ ಗಿರಿಜಾ ಪೂಜಾರಿ (52) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ಪತಿ ರಾಜು ಪೂಜಾರಿ ತಲೆಮರೆಸಿಕೊಂಡಿದ್ದಾನೆ. ಕೌಟುಂಬಿಕ ವಿಚಾರವಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತೆನ್ನಲಾಗಿತ್ತು. ಕೂಲಿ ಕೆಲಸ ಮಾಡುವ ರಾಜು ಪೂಜಾರಿ ಇಂದು ಮನೆಯಲ್ಲಿ ಪತ್ನಿ ಜೊತೆ ಗಲಾಟೆ ಮಾಡಿ ಸಿಟ್ಟಿನಿಂದ ಅಲ್ಲೇ ಇದ್ದ ಕತ್ತಿಯಿಂದ ಕಡಿದಿದ್ದಾನೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಗಿರಿಜಾ ಸ್ಥಳದಲ್ಲೇ ಮೃತಪಟ್ಟರು. ಕೊಲೆ ಮಾಡಿದ ಬಳಿಕ ರಾಜು ಪೂಜಾರಿ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದು, ಇವರಿಬ್ಬರು ವಿವಾಹವಾಗಿ ಬೇರೆ ಮನೆ ಮಾಡಿ ವಾಸ ಮಾಡುತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.





