ಸಚಿವ ಡಿಕೆಶಿ ಮಾಜಿ ಆಪ್ತ ಸಹಾಯಕನಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು
ಅಮಾನ್ಯಗೊಂಡ ನೋಟುಗಳ ಅಕ್ರಮ ವಿನಿಮಯ ಪ್ರಕರಣ

ಬೆಂಗಳೂರು, ಜು.23: ಅಮಾನ್ಯಗೊಂಡ ನೋಟುಗಳ ಅಕ್ರಮ ವಿನಿಮಯ ಪ್ರಕರಣದ ಆರೋಪಿಗಳಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾಜಿ ಆಪ್ತ ಸಹಾಯಕ ಎಸ್.ಶೇಷಗಿರಿರಾವ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಮಾಜಿ ಆಪ್ತ ಸಹಾಯಕ ಬಿ.ಪದ್ಮನಾಭಯ್ಯಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸುಮಾರು 10 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಅಮಾನ್ಯಗೊಂಡ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ಪದ್ಮನಾಭಯ್ಯ ಹಾಗೂ ಶೇಷಗಿರಿರಾವ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಸಿಬಿಐ ವಿಶೇಷ ನ್ಯಾಯಾಲಯವು ಈಚೆಗೆ ನಿರಾಕರಿಸಿ ಆದೇಶಿಸಿತ್ತು. ಇದರಿಂದ ನಿರೀಕ್ಷಣಾ ಜಾಮೀನು ಕೋರಿ ಈ ಇಬ್ಬರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸ್ದಿದರು.
ಸೋಮವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ವಿಚಾರಣೆ ಸಲುವಾಗಿ ಅರ್ಜಿದಾರರು ಏಳು ಬಾರಿ ಸಿಬಿಐ ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಹೀಗಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ. ತನಿಖಾಧಿಕಾರಿಗಳಿಗೂ ಸಹ ಅರ್ಜಿದಾರರನ್ನು ಬಂಧಿಸುವ ಅಗತ್ಯ ಇಲ್ಲವಾಗಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿದಾರರು ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಂತರ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅರ್ಜಿಗಳನ್ನು ಪುರಸ್ಕರಿಸಿದರು. ಇದೇ ವೇಳೆ ಪ್ರಕರಣದ ಇತರೆ ಆರೋಪಿಗಳಾಗಿರುವ ಶಿವಾನಂದ, ತಿಮ್ಮಯ್ಯ ಹಾಗೂ ಎಸ್.ಪದ್ಮರೇಖಾ ಎಂಬುವರಿಗೂ ನ್ಯಾಯಪೀಠ ನಿರೀಕ್ಷಣಾ ಜಾಮೀನು ನೀಡಿದೆ.







