ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಯುವತಿ: ದಂಪತಿಗೆ ರಕ್ಷಣೆ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಜು.23: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರೀತಿಸಿದ ಮುಸ್ಲಿಂ ಯುವಕನನ್ನು ಮದುವೆಯಾದ ಯುವತಿಯನ್ನು ಪತಿಯ ಮಡಿಲಿಗೆ ಸೇರಿಸಿದ ಹೈಕೋರ್ಟ್, ಯುವ ದಂಪತಿಗೆ ರಕ್ಷಣೆ ಒದಗಿಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತುಂಗಾ ನಗರ ಠಾಣಾ ಇನ್ಸ್‌ಪೆಕ್ಟರ್‌ಗೆ ಕಟ್ಟಪ್ಪಣೆ ಮಾಡಿದೆ.
ಪ್ರಕರಣದಲ್ಲಿನ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ನಂತರ ತಂದೆ-ತಾಯಿಯ ಮನೆಬಿಟ್ಟು ಹೋಗಿದ್ದ ಯುವತಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಳು. ವಿವಾಹದ ನಂತರ ಇಬ್ಬರು ಒಂದೇ ಮನೆಯಲ್ಲಿ ಜೀವಿಸುತ್ತಿದ್ದರು. ಈ ಮಧ್ಯೆ ಯುವತಿಯ ಪೋಷಕರು ನೀಡಿದ್ದ ದೂರು ಆಧರಿಸಿ ಪೊಲೀಸರು ದಂಪತಿ ನೆಲೆಸಿದ್ದ ಮನೆ ಪತ್ತೆ ಹೆಚ್ಚಿದ್ದರು. ಬಳಿಕ ಪೊಲೀಸರು ಯುವತಿಯನ್ನು ಕರೆದೊಯ್ದು ಬಾಲಕಿಯರ ಮಂದಿರದಲ್ಲಿ ಇರಿಸಿದ್ದರು. ಇದರಿಂದ ಪೊಲೀಸರು ತನ್ನ ಪತ್ನಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಯುವಕ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ಹೈಕೋರ್ಟ್ ನಿರ್ದೇಶನದ ಮೇರೆಗೆ ತುಂಗಾ ನಗರ ಠಾಣಾ ಪೊಲೀಸರು ಯುವತಿಯನ್ನು ಸೋಮವಾರ ವಿಚಾರಣೆಗೆ ಹಾಜರುಪಡಿಸಿದ್ದರು. ಯುವತಿಯು ತನ್ನ ಪತಿಯೊಂದಿಗೆ ತೆರಳಿ ಜೀವನ ನಡೆಸುವುದಾಗಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದಳು. ಅದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಯುವ ದಂಪತಿ ಒಂದಾಗಿ ಜೀವಿಸಲು ಅವಕಾಶ ಕಲ್ಪಿಸಿತು.
ಅಲ್ಲದೆ, ಇದು ಅಂತರ್ ಧರ್ಮೀಯ ಮದುವೆ ಆಗಿರುವುದರಿಂದ ಯುವಕ ಹಾಗೂ ಆತನ ಕುಟುಂಬ ಸದಸ್ಯರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಯುವ ದಂಪತಿಯ ರಕ್ಷಣೆ ಪೊಲೀಸರ ಕರ್ತವ್ಯವಾಗಿದೆ. ಒಂದು ವೇಳೆ ಯುವತಿ, ಯುವಕ ಅಥವಾ ಯುವಕನ ಕುಟುಂಬ ಸದಸ್ಯರ ಜೀವಕ್ಕೆ ಅಪಾಯವಿರುವ ಬಗ್ಗೆ ಮಾಹಿತಿ ಬಂದರೆ ಕೂಡಲೇ ಅವರ ರಕ್ಷಣೆಗೆ ಧಾವಿಸಬೇಕು. ಯವಕನಿಗೆ ಸೇರಿದ ವಸ್ತುಗಳನ್ನು ಸಂರಕ್ಷಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತುಂಗಾನಗರ ಠಾಣಾ ಇನ್ಸ್‌ಪೆಕ್ಟರ್ ಅವರಿಗೆ ನಿರ್ದೇಶಿಸಿದರು.
ಒಂದೊಮ್ಮೆ ನ್ಯಾಯಾಲಯದ ಈ ಆದೇಶ ಪಾಲಿಸಲು ಪೊಲೀಸರು ವಿಫಲವಾದರೆ ಯುವಕ ಅಥವಾ ಆತನ ಕುಟುಂಬ ಯಾವುದೇ ಸದಸ್ಯ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು. ಪೊಲೀಸರ ಆ ಕಾರ್ಯಲೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.







