ಹನೂರು: ಕಳಪೆ ರಸ್ತೆ ಕಾಮಗಾರಿ ಆರೋಪ; ಗ್ರಾಮಸ್ಥರ ಆಕ್ರೋಶ

ಹನೂರು,ಜು.23: ರಸ್ತೆ ಕಾಮಗಾರಿಯು ಕಳಪೆ ಗುಣಮಟ್ಟ ಮತ್ತು ಅವೈಜ್ಞಾನಿಕದಿಂದ ಕೂಡಿದೆ ಎಂದು ಗ್ರಾಮಸ್ಥರು ಮತ್ತು ಸಬ್ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆದು ಕಾಮಗಾರಿ ಸ್ಥಗಿತಗೊಂಡ ಘಟನೆ ಸೋಮವಾರ ಮಾರ್ಟಳ್ಳಿಯ ಪಾಲೀಮೇಡು ಎಂಬಲ್ಲಿ ನಡೆದಿದೆ.
ಹನೂರು ತಾಲೂಕು ಮಾರ್ಟಳ್ಳಿ ಗ್ರಾ.ಪಂ. ಪಾಲಿಮೇಡು ಮೂರನೇ ವಾರ್ಡ್ ಆರೋಗ್ಯಮ್ಮನ ಮನೆಯಿಂದ ಚರ್ಚ್‍ವರೆಗೆ ಶಾಸಕರ ಅನುದಾನದಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ನಿರ್ಮಿಸಿ ಅಭಿವೃದ್ದಿ ಪಡಿಸಲು ಅನುದಾನ ಬಿಡುಗಡೆಯಾಗಿತ್ತು. ಅದರಂತೆ ಕಾಮಗಾರಿಯೂ ಸಹ ಪ್ರಗತಿಯ ಹಂತದಲ್ಲಿತ್ತು. ಆದರೆ ಈ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿದೆ ಮತ್ತು ಅವೈಜ್ಞಾನಿಕದಿಂದ ಕೂಡಿದೆ ಎಂದು ಗ್ರಾಮಸ್ಥರು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಈ ವೇಳೆ ಗ್ರಾಮಸ್ಥರ ಬೆಂಬಲಕ್ಕೆ ನಿಂತ ಗ್ರಾಪಂ ಸದಸ್ಯ ರಾಮಲಿಂಗಮ್ ಮತ್ತು ಸಬ್ ಗುತ್ತಿಗೆದಾರರ ನಡುವೆ ಮಾತಿನ ಚಕಮಖಿ ನಡೆಯಿತು. ಗ್ರಾಮಸ್ಥರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಿಡಿಕಾರಿ ಧಿಕ್ಕಾರಗಳನ್ನು ಕೂಗಿದರು. ಸ್ಥಳಕ್ಕೆ ಗುತ್ತಿಗೆದಾರರು, ಸಂಬಂಧಪಟ್ಟ ಅಧಿಕಾರಿಗಳು ಆಗಮಿಸುವವರೆಗೂ ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.





