ಮ್ಯಾನ್ಯುಯಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಸಭೆ
ಉಡುಪಿ, ಜು.23: ಮ್ಯಾನ್ಯುಯಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ಕುರಿತಂತೆ ಕುಂದಾಪುರದ ಸಹಾಯಕ ಆಯುಕ್ತ ಟಿ.ಭೂಬಾಲನ್ ಅಧ್ಯಕ್ಷತೆಯಲ್ಲಿ ಉಪವಿಬಾಗ ಮಟ್ಟದ ಜಾಗೃತಿ ಸಮಿತಿ ಸಭೆ ಕುಂದಾಪುರದ ಉಪವಿಬಾಗಾಧಿಕಾರಿ ಕಾರ್ಯಾಲಯ ದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಕುಂದಾಪುರ, ಉಡುಪಿ, ಕಾರ್ಕಳ, ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್ ಹಾಗೂ ಗ್ರಾಪಂಗಳಲ್ಲಿರುವ ಪೌರ ಕಾರ್ಮಿಕರ ಬಗ್ಗೆ 15 ದಿನಗಳೊಳಗೆ ಸರ್ವೇ ಮಾಡಿ ವರದಿ ನೀಡಲು ಮತ್ತು ನಗರಸಭೆ/ಪುರಸಭೆ/ಗ್ರಾಪಂ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸುರಕ್ಷತೆ ಹಿತದೃಷ್ಟಿಯಿಂದ ಹ್ಯಾಂಡ್ ಗ್ಲೌಸ್‌ಗಳನ್ನು ಧರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳು ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳು ಸೂಚಿಸಿದರು.
ಈ ಅಧಿನಿಯಮದ ಕುರಿತು ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತ್ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಪಡಿಸಲು ಹಾಜರಿದ್ದ ಎಲ್ಲ ನಗರಸಭೆ ಆಯುಕ್ತರು/ಮುಖ್ಯಾಧಿಕಾರಿಗಳು ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈಗಾಗಲೇ ಕುಂದಾಪುರ ತಾಲೂಕಿನ ಕೋಡಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಸಂದೀಪ(22ವ) ಎಂಬವರು ಮಹಮ್ಮದ್ ಜಿಲಾನಿ ಎಂಬ ವರ ಮನೆಯ ಶೌಚಾಲಯದ ತೊಟ್ಟಿಯನ್ನು ಸ್ವಚ್ಛಗೊಳಿಸುವ ಸಂದರ್ದಲ್ಲಿ ಉಸಿರು ಗಟ್ಟಿ ಮೃತಪಟ್ಟಿದ್ದಾನೆ. ಆದ್ದರಿಂದ ಮಹಮ್ಮದ್ ಜಿಲಾನಿ ಮೇಲೆ ಈ ನಿಯಮಗಳಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಇಂತಹ ಪ್ರಕರಣಗಳು ಮರುಕಳಿಸದಂತೆ ಜಾಗೃತಿ ವಹಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸದಸ್ಯರಾದ, ಗಣೇಶ ಕೊರಗ, ಶಕುಂತಲಾ, ಆನಂದ ಬಿಲ್ಲವ, ನವೀನಚಂದ್ರ ನಾಯ್ಕ ಮತ್ತು ಉಪ ವಿಭಾಗದ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಸ್ವಾಗತಿಸಿ ಮ್ಯಾನೇಜರ್ ವೇರ್ಣೇಕರ ವಂದಿಸಿದರು.







